ಚಲಿಸುತ್ತಿದ್ದ ಬಸ್ ಗೆ ಬೆಂಕಿ: ಪ್ರಯಾಣಿಕರು ಅಪಾಯದಿಂದ ಪಾರು
ನವದೆಹಲಿ: ನವದೆಹಲಿಯ ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾ ಸಂಪರ್ಕಿಸುವ ಬಸ್ ಚಲಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಘಟನೆ ನೋಯ್ಡಾ ಎಕ್ಸ್ ಪ್ರೆಸ್ ಬಸ್ ನಲ್ಲಿ ನಡೆದಿದೆ.
ಬೆಂಕಿ ತಗುಲಿದ ಬೆನ್ನಲ್ಲೇ ಭಯಭೀತರಾದ ಪ್ರಯಾಣಿಕರು ಬಸ್ ನಿಂದ ಹೊರಹಾರುವ ಮೂಲಕ ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ದೊರಕಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿದ್ದು ಉಳಿದ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದರು ಎಂದು ವರದಿ ತಿಳಿಸಿದೆ.
ಹವಾನಿಯಂತ್ರಿತ ಬಸ್ ಅಗ್ನಿ ಅನಾಹುತದಿಂದ ಸಂಪೂರ್ಣವಾಗಿ ಭಸ್ಮಗೊಂಡಿದ್ದು ಯಾವುದೇ ಸಾವು-ನೋವು ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅನಾಹುತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.





