ಪುತ್ತೂರಿನ ಕೃಷಿಕನ ಮಗಳು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆ
ಪುತ್ತೂರು: ಪುತ್ತೂರಿನ ಕೃಷಿಕನ ಮಗಳು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ಆರು ವರ್ಷಗಳಿಂದ ಸತತ ಪ್ರಯತ್ನ ಇದೀಗ ಫಲ ನೀಡಿದ್ದು, ಅಪ್ಪ ಅಮ್ಮ ಕಷ್ಟಪಟ್ಟು ಮಗಳಿಗೆ ನೀಡಿದ ಶಿಕ್ಷಣ ಇಂದು ಸಾರ್ಥಕತೆ ಪಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಯೂರು ಗ್ರಾಮದ ಇಳಂತಾಜೆ ನಿವಾಸಿ ಶ್ರೀಧರ ಶೆಟ್ಟಿ-ಹರಿಣಾಕ್ಷಿ ದಂಪತಿ ಪುತ್ರಿ ದೀಪಿಕಾ ಎಸ್.ಶೆಟ್ಟಿ ಅವರು ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನಡೆಸಿದ 2025ನೇ ಸಾಲಿನ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರಾಂಕ್ ಪಡೆದಿದ್ದಾರೆ.
ಶ್ರೀಧರ ಶೆಟ್ಟಿ-ಹರಿಣಾಕ್ಷಿ ದಂಪತಿ ಕೃಷಿಕರಾಗಿದ್ದು, ಏಕೈಕ ಮಗಳು ದೀಪಿಕಾ , ಕೆಯ್ಯರು ಸರಕಾರಿ ಶಾಲೆಯಲ್ಲಿ ಕಲಿತು, ಕೆಯ್ಯರು ಸರಕಾರಿ ಪ.ಪೂ. ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬಳಿಕ ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದರು. 8 ವರ್ಷಗಳಿಂದ ಬೆಂಗಳೂರಿನಲ್ಲಿ ಲಾ ಪ್ರಾಕ್ಟಿಸ್ ಮಾಡುತ್ತಿದ್ದಾರೆ.
ಸತತ 6 ವರ್ಷಗಳಿಂದ ನ್ಯಾಯಾಧೀಶರ ಪರೀಕ್ಷೆ ಬರೆಯುತ್ತಿದ್ದ ದೀಪಿಕಾ ಎಸ್.ಶೆಟ್ಟಿ, ಈ ಬಾರಿ ಆರನೇ ಪ್ರಯತ್ನದಲ್ಲಿ ಗೆದ್ದಿದ್ದಾರೆ. 2025ರ ಅಕ್ಟೋಬರ್‌ನಲ್ಲಿ ಪ್ರಿಲಿಮಿನರಿ ಪರೀಕ್ಷೆ ಬರೆದು ಉತ್ತೀರ್ಣರಾದ ದೀಪಿಕಾ, ಡಿಸೆಂಬರ್‌ನಲ್ಲಿ ಮೈನ್ಸ್ ಎಕ್ಸಾಂ ಬರೆದು ಪಾಸಾಗಿದ್ದಲ್ಲದೆ, ಸಂದರ್ಶನದಲ್ಲೂ ಸೈ ಎನಿಸಿಕೊಂಡು ತೇರ್ಗಡೆ ಹೊಂದಿದ್ದಾರೆ.




