ಬಸ್, ಟಾಟಾ ಸುಮೋ ನಡುವೆ ಭೀಕರ ಅಪಘಾತ: ಐವರು ಸ್ಥಳದಲ್ಲಿಯೇ ಮೃತ್ಯು, ನಾಲ್ವರು ಗಂಭೀರ
ಗದಗ : ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಹಾಗೂ ಟಾಟಾ ಸುಮೋ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ವರಿಗೆ ಗಂಭೀಯ ಗಾಯಗಳಾಗಿವೆ.
ಗದಗ ಜಿಲ್ಲೆ ನರೇಗಲ್ ಹೋಬಳಿಯ ಗಜೇಂದ್ರಗಡ-ನರೇಗಲ್ ಮಾರ್ಗಮಧ್ಯೆ ಸೋಮವಾರ ಬೆಳಿಗ್ಗೆ ಈ ದುರ್ಘಟನೆ ನಡೆದಿದೆ.
ಮೃತರು ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಮಾದನಹಿಪ್ಪರಗಿ ಹಾಗೂ ಅಫಜಲಪುರ ಗ್ರಾಮದವರು ಎನ್ನಲಾಗಿದೆ.
ಟಾಟಾ ಸುಮೋ ವಾಹನದಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಬಾಲೆಹೊಸೂರ ಗ್ರಾಮದ ಮಠ ಹಾಗೂ ಶಿರಹಟ್ಟಿ ಫಕ್ಕಿರೇಶ್ವರ ಮಠಕ್ಕೆ ಹೊರಟಿದ್ದರು ಎನ್ನಲಾಗುತ್ತಿದೆ.
ನರೇಗಲ್ ಪಟ್ಟಣದಿಂದ ಗಜೇಂದ್ರಗಡ ಕಡೆಗೆ ಹೊರಟಿದ್ದ ಬಸ್ ಹಾಗೂ ಗಜೇಂದ್ರಡ ಮಾರ್ಗದ ಮೂಲಕ ಬರುತಿದ್ದ ಟಾಟಾ ಸುಮೋ ವಾಹನಗಳು ನರೇಗಲ್ ಹೊರವಲಯದ ಗಡ್ಡಿ ಹಳ್ಳದ ಸಮೀಪದಲ್ಲಿ ಡಿಕ್ಕಿಯಾಗಿವೆ.
ಇದರಿಂದ ಟಾಟಾ ಸುಮೋ ವಾಹನದಲ್ಲಿ ಮಠಕ್ಕೆ ಹೊರಟಿದ್ದ ಪ್ರಯಾಣಿಕರು ದುರ್ಮರಣಕ್ಕೀಡಾಗಿ ಮಸಣ ಸೇರಿದ್ದಾರೆ.




