ಶಾಂತಿ, ಸಹಬಾಳ್ವೆ ವಾತಾವರಣ ಇನ್ನಷ್ಟು ಗಟ್ಟಿಗೊಳಿಸಬೇಕಿದೆ: ಎ.ಪಿ.ಅಬೂಬಕರ್ ಮುಸ್ಲಿಯಾರ್
ಬೆಂಗಳೂರು: ಶಾಂತಿ ಹಾಗೂ ಸಹಬಾಳ್ವೆ ವಾತಾವರಣ ಇನ್ನಷ್ಟು ಗಟ್ಟಿಗೊಳಿಸಬೇಕಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕರೆ ನೀಡಿದ್ದಾರೆ.
ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್(ಎಸ್ಸೆಸ್ಸೆಫ್)50ನೆ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಗೋಲ್ಡನ್ ಫಿಪ್ಟಿ ಮಹಾ ಸಮ್ಮೇಳನ ಹಾಗೂ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡಿರುವ ಕಾಶ್ಮೀರದಿಂದ ಆರಂಭವಾಗಿರುವ ‘ಸಂವಿಧಾನ ಯಾತ್ರೆ’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಆಧುನಿಕ ಜಗತ್ತಿನ ಪ್ರಜಾಸತ್ತಾತ್ಮಕ ಸಮಾಜದಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ದೇಶದ ಪ್ರಜೆಗಳ ರಾಜಕೀಯ, ಸಾಮಾಜಿಕ, ಆರ್ಥಿಕ ಜೀವನಕ್ಕೆ ಒಂದು ರೂಪುರೇಷೆ ನೀಡಿವೆ. ಇವುಗಳ ಪಾಲನೆ ಪ್ರಜೆಗಳಿಗೂ ಅಷ್ಟೇ ಮುಖ್ಯವಾಗಿದೆ ಎಂದರು.
ಪ್ರಜಾಸತ್ತಾತ್ಮಕ ನಿಯಮಗಳು ಮತ್ತು ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ಮನುಷ್ಯ ತನ್ನ ಬದುಕನ್ನು ಕಟ್ಟಿಕೊಳ್ಳುವುದು ಅನಿವಾರ್ಯ ಹಾಗೂ ಬದ್ಧತೆಯಾಗಿದೆ. ಇದರಿಂದ ಮಾನವಿಯತೆಯ ಬದುಕು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.




