ಪ್ಯಾಸೆಂಜರ್ ರೈಲಿನಲ್ಲಿ ಬೆಂಕಿ: 10 ಪ್ರಯಾಣಿಕರು ಸಜೀವದಹನ
ಚೆನ್ನೈ: ಮದುರೈ ರೈಲು ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 10 ಪ್ರಯಾಣಿಕರು ಮೃತಪಟ್ಟಿರುವ ದುರಂತ ಇಂದು (ಶನಿವಾರ, ಆ.26) ಬೆಳಿಗ್ಗೆ ಸಂಭವಿಸಿದೆ.
ಲಖನೌ–ರಾಮೇಶ್ವರಂ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಮುಂಜಾನೆ 5.15ಕ್ಕೆ ಬೆಂಕಿ ಕಾಣಿಸಿಕೊಂಡಿದೆ. 55 ಪ್ರಯಾಣಿಕರು ಇದ್ದ ಆ ಬೋಗಿಯನ್ನು ನಾಗರಕೋಯಿಲ್ ಬಳಿ ರೈಲಿಗೆ ಅಳವಡಿಸಲಾಗಿತ್ತು ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಮೃತಪಟ್ಟವರಲ್ಲಿ ಆರು ಮಂದಿ ಉತ್ತರ ಪ್ರದೇಶದವರಾಗಿದ್ದು, ಅವರು ರಾಮೇಶ್ವರಂಗೆ ತೀರ್ಥಯಾತ್ರೆ ಸಲುವಾಗಿ ತೆರಳಿದ್ದರು.
ಅಡುಗೆ ಉದ್ದೇಶಕ್ಕಾಗಿ ಅಕ್ರಮವಾಗಿ ಬೋಗಿಯೊಳಗೆ ತರಲಾಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿರುವುದು ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.




