ಉಳ್ಳಾಲ: ಟಾರ್ಗೆಟ್ ತಂಡದ ನಟೋರಿಯಸ್‌ನಿಂದ ಕೊಲೆ ಯತ್ನ: ಯುವಕ ಆಸ್ಪತ್ರೆಗೆ ದಾಖಲು
ಉಳ್ಳಾಲ: ನಟೋರಿಯಸ್ ಆರೋಪಿಯೋರ್ವ ಬಾಡಿಗೆ ಮನೆ ವಿಚಾರಕ್ಕೆ ಸಂಬಂಧಿಸಿ ಕತ್ತಿಯಿಂದ ಕಡಿದು ಯುವಕನ ಕೊಲೆಯತ್ನಿಸಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನೆತ್ತಿಲಪದವು ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.
ನೆತ್ತಿಲಪದವು ನಿವಾಸಿ ಮನ್ಸೂರ್ (40) ಕೊಲೆಯತ್ನಕ್ಕೆ ಒಳಗಾದವರು. ಟಾರ್ಗೆಟ್ ತಂಡಕ್ಕೆ ಸೇರಿದ ಉಳ್ಳಾಲ ಕೋಟೆಪುರ ನಿವಾಸಿ ನಮೀರ್ ಹಂಝ ಕೊಲೆಗೆ ಯತ್ನಿಸಿದ ಆರೋಪಿ. ಕೃತ್ಯ ಎಸಗಿದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ.
ನಮೀರ್ ಹಂಝ ತನ್ನ ಸಹೋದರನಿಗೆ ಬಾಡಿಗೆ ಮನೆಗೆಂದು ನೆತ್ತಿಲಪದವು ಬಳಿಯಿರುವ ಮನ್ಸೂರ್ ಸಂಬಂಧಿಕರಿಗೆ ಸೇರಿದ ಮನೆಗೆ ಬಂದಿದ್ದರು. ಆದರೆ ಮನ್ಸೂರ್ ಇದನ್ನು ತಡೆದು, ರೌಡಿಗಳಿಗೆ ಬಾಡಿಗೆ ಮನೆ ನೀಡದಂತೆ ಮನೆಯವರಿಗೆ ತಿಳಿಸಿದ್ದರು. ಇದರಿಂದ ಮನ್ಸೂರ್ ಹಾಗೂ ನಮೀರ್ ಹಂಝ ತಂಡಗಳ ನಡುವೆ ಮಾತಿನಚಕಮಕಿ ನಡೆದು, ಪರಸ್ಪರ ಹೊಡೆದಾಟಕ್ಕೂ ಕಾರಣವಾಯಿತು. ಇದೇ ದ್ವೇಷದಲ್ಲಿ ನಮೀರ್ ಕತ್ತಿಯಿಂದ ಮನ್ಸೂರ್ ಕೈಗೆ ಕಡಿದು ಕೊಲೆಗೆ ಯತ್ನಿಸಿದ್ದಾನೆ. ಕೃತ್ಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಉಳ್ಳಾಲದಲ್ಲಿ ಹನಿಟ್ರ್ಯಾಪ್, ಮುಕ್ಕಚ್ಚೇರಿ ಬಿಜೆಪಿ ಕಾರ್ಯಕರ್ತ ಜುಬೈರ್ ಹತ್ಯೆ ಸಹಿತ ವಿವಿಧ ಕೊಲೆಯತ್ನ, ಹಲ್ಲೆ ಪ್ರಕರಣಗಳಲ್ಲಿ ಟಾರ್ಗೆಟ್ ತಂಡ ಸಕ್ರಿಯವಾಗಿತ್ತು. ತಂಡದ ಇಲ್ಯಾಸ್ ಕೊಲೆ ನಂತರ ತಂಡದ ಕೃತ್ಯಗಳು ಕಡಿಮೆಯಾಗಿತ್ತು. ಇದೇ ತಂಡದಲ್ಲಿದ್ದುಕೊಂಡ ಹಂಝ ಕೂಡಾ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು ಎನ್ನಲಾಗಿದೆ.





