ಮಿಲಾದ್ ರ್‍ಯಾಲಿಗೆ ಪ್ರಚೋದನಕಾರಿ ಶಿರ್ಷಿಕೆಯ ಟ್ವೀಟ್:
ಸೂಲಿಬೆಲೆ ವಿರುದ್ದ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಕಿಡಿ

ಬೆಂಗಳೂರು: ಮೀಲಾದುನ್ನಬಿ ಆಚರಣೆಯ ರ್‍ಯಾಲಿಯ ವೀಡಿಯೊ ಒಂದನ್ನು ಟ್ವಿಟರ್ ನಲ್ಲಿ ಹಾಕಿ ಪ್ರಚೋದನಕಾರಿ ಶೀರ್ಷಿಕೆ ನೀಡಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸಾಮಾಜಿ ಜಾಲತಾಣದಾದ್ಯಂತ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.
ಕೆಲವರು ಈ ಟ್ವೀಟ್ ಅನ್ನು ಬೆಂಬಲಿಸಿ ಪ್ರತಿಕ್ರಿಯಿಸಿದರೆ, ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸೇರಿದಂತೆ ಹಲವರು ಸೂಲಿಬೆಲೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಾರೆ. ಒಂದು ಕಡೆ ಸಣ್ಣ ಮಕ್ಕಳು ಹಸಿರು ಧ್ವಜದೊಂದಿಗೆ ಮೀಲಾದುನ್ನಬಿ ಮೆರವಣೀಗೆ ಸಾಗುವ ದೃಶ್ಯವಿದ್ದು, ಜೊತೆಗೆ ಪಕ್ಕದಲ್ಲೇ ಬಾಲಕನೊಬ್ಬ ಕೇಸರಿ ಧ್ವಜ ಹಿಡಿದು ಸಾಗುವ ದೃಶ್ಯ ವೀಡಿಯೋದಲ್ಲಿ ಕಾಣಿಸುತ್ತಿದೆ.
ಈ ವೀಡಿಯೋಗೆ ”ಕುರಿಗಳು ಹಿಂಡಾಗಿ ನಡೆಯುವಾಗ ಯಾವುದೇ ಭಯ ಇಲ್ಲದೆ, ಸಿಂಹ ಏಕಾಂಗಿಯಾಗಿಯೇ ಹೆಜ್ಜೆ ಹಾಕುತ್ತಿದೆ” ಎಂಬ ಶೀರ್ಷಿಕೆಯೊಂದಿಗೆ ಟ್ವಟರ್ ನಲ್ಲಿ ಚಕ್ರವರ್ತಿ ಸೂಲಿಬೆಲೆ ಪೋಸ್ಟ್ ಮಾಡಿದ್ದಾರೆ.
ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ”ಮುಗ್ಧ ಮಕ್ಕಳನ್ನು ಪ್ರಚೋದನೆಗೆ ಬಳಸಬಾರದು. ನೀವು ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ? ನೀವು ಒಬ್ಬ ಐಕಾನ್, ದಯವಿಟ್ಟು ಧನಾತ್ಮಕ ಪದಗಳನ್ನೇ ಹಾಕಿ” ಎಂದು ಟ್ವೀಟ್ ಗೆ ನಲ್ಲಿ ಪ್ರತಿಕ್ರಿಯಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.