ಸುಳ್ಯ: ಸೌಜನ್ಯ ಹಂತಕರ ಸತ್ಯ ಹೊರಬರಬೇಕು, ನೈಜ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು: ಮಹೇಶ್ ಶೆಟ್ಟಿ ತಿಮರೋಡಿ ಅಕ್ರೋಶ
ಸುಳ್ಯ: ಆ.8ರಂದು ಸುಳ್ಯದಲ್ಲಿ ಬೆಳ್ತಂಗಡಿಯ ಸೌಜನ್ಯ ಹತ್ಯೆಗೆ ನ್ಯಾಯ ಕೇಳಿ ಬೃಹತ್ ಜಾಥಾ, ಪ್ರತಿಭಟನಾ ಸಭೆ ನಡೆದಿದ್ದು, ಕಾರ್ಯಕ್ರಮದಲ್ಲಿ ಅನೇಕ ಮಂದಿ ಭಾಗವಹಿಸಿದ್ದರು.
ಈ ವೇಳೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ, ಸೌಜನ್ಯ ಅತ್ಯಾಚಾರ, ಕೊಲೆ ನಡೆದು 11 ವರ್ಷ ಕಳೆದರೂ ಇದುವರೆಗೂ ನ್ಯಾಯ ಸಿಕ್ಕಿಲ್ಲ, ಇದೀಗ 11 ವರ್ಷದ ಮೇಲೆಯೂ ನ್ಯಾಯ ಸಿಕ್ಕಿಲ್ಲ ಎಂದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ಎಂದರು.
ದೇವರ ಹೆಸರಲ್ಲಿ ಧಾರ್ಮಿಕ ಭಯೋತ್ಪಾದನೆ ಮಾಡಬೇಡಿ, ಇದು ಧರ್ಮದ ಮತ್ತು ಸತ್ಯದ ಹೋರಾಟ. 11 ವರ್ಷದ ಮೇಲೂ ಹೋರಾಟ ಮುಂದುವರಿದಿದೆ. ಹೋರಾಟ ಮಾಡುವವರ ವಿರುದ್ಧವೇ ಇಂದು ಅಪಪ್ರಚಾರ ನಡೆಯುತ್ತಿದೆ. ಇದು ಸಮಾಜಕ್ಕೆ ಗೊತ್ತಾಗಬೇಕು. ಸತ್ಯ ಹೊರಬರಬೇಕು, ನೈಜ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಅವರು ಹೇಳಿದರು.
ಇನ್ನು ನಮ್ಮ ಹೋರಾಟ ದೇವಸ್ಥಾನದ ವಿರುದ್ಧವಲ್ಲ, ಧರ್ಮದ ವಿರುದ್ದವಲ್ಲ, ಜಾತಿಯ ವಿರುದ್ಧವಲ್ಲ, ನಮ್ಮದು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಮಾಡಿದವರನ್ನು ಪತ್ತೆ ಹಚ್ಚಲು ಹೋರಾಟ ನಡೆಸುತ್ತಿದ್ದೇವೆ, ಅತ್ಯಾಚಾರಿಗಳು ಈ ಮಣ್ಣಿನಲ್ಲಿ ಬದುಕಬಾರದು ಎಂದು ಹೇಳಿದ್ದಾರೆ.





