ಮಂಗಳೂರು: ರೈಲಿನ ಬೋಗಿ ಹತ್ತುವಾಗ ಆಯತಪ್ಪಿ ಬೀಳುತ್ತಿದ್ದ ವೃದ್ಧ: ಪೊಲೀಸ್ ಸಿಬ್ಬಂದಿಯಿಂದ ರಕ್ಷಣೆ
ಮಂಗಳೂರು: ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಹತ್ತಲು ಪ್ರಯತ್ನಿಸಿ ಆಯಾ ತಪ್ಪಿ ಬೀಳುತ್ತಿದ್ದ ಹಿರಿಯ ವ್ಯಕ್ತಿಯನ್ನು ಪೊಲೀಸ್ ಸಿಬ್ಬಂದಿ ರಕ್ಷಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಗುರುವಾರ ಸಂಜೆ 6.15ರ ವೇಳೆ ಮಲಬಾರ್ ಎಕ್ಸ್‌ಪ್ರೆಸ್ ರೈಲು ಹೊರಟು ಚಲಿಸುತ್ತಿದ್ದಾಗ ಶಂಕರ್ ಬಾಬು(70) ಎಂಬ ಪ್ರಯಾಣಿಕರೋರ್ವರು ರೈಲಿನ ಎಸ್-6 ಕೋಚ್‌ಗೆ ಹತ್ತಲು ಪ್ರಯತ್ನಿಸಿ ಸಾಧ್ಯವಾಗದೆ ಹ್ಯಾಂಡಲ್‌ನಲ್ಲಿ ನೇತಾಡುತ್ತಿದ್ದರು ಇದನ್ನು ಗಮನಿಸಿದ ಆರ್‌ಪಿಎಫ್ ಸಿಬ್ಬಂದಿ ಪ್ರಕಾಶ್ ಅವರು ಶಂಕರ್ ಬಾಬು ಅವರನ್ನು ರಕ್ಷಿಸಿದ್ದಾರೆ. ಪ್ರಕಾಶ್ ಗಮನಿಸದಿದ್ದರೆ ಶಂಕರ್ ಅವರು ಹಳಿ ಮತ್ತು ರೈಲಿನ ನಡುವೆ ಸಿಲುಕಿ ಸಮಸ್ಯೆಯಾಗುವ ಸಾಧ್ಯತೆ ಇತ್ತು. ಕೇರಳದ ಕಣ್ಣೂರಿನ ವಯಲ್‌ವೀಡು ನಿವಾಸಿ ಶಂಕರ್ ಬಾಬು ಅವರ ಬಲಗಾಲಿನ ಬೆರಳಿಗೆ ಸ್ವಲ್ಪ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.




