March 21, 2026

ವಿಟ್ಲ: ಮಂಗಳೂರು-ಬೆಂಗಳೂರು ಸ್ಲೀಪರ್ ಕೋಚ್ ಬಸ್ಸಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ:
ಆರೋಪಿ ಏಳು ವರ್ಷ ಕಠಿಣ ಶಿಕ್ಷೆ

0
62321159.jpg

ವಿಟ್ಲ: ಪರಿಶಿಷ್ಟ ಪಂಗಡದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಬಸ್ಸಿನಲ್ಲಿ ಅತ್ಯಾಚಾರ ಎಸಗಿದ್ದ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ನೀರ್ಕಜೆಯ ನಿವಾಸಿ ನಿತಿನ್(27)ಗೆ ಏಳು ವರ್ಷ ಕಠಿಣ ಸಜೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ಮಂಗಳೂರಿನ ಒಂದನೇ ತ್ವರಿತ ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದೆ.

ಬಾಲಕಿಯ ಅಪಹರಣ ಕೃತ್ಯಕ್ಕೆ 3 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ ಮೂರು ತಿಂಗಳು ಕಠಿಣ ಶಿಕ್ಷೆ, ಅತ್ಯಾಚಾರ ಎಸಗಿದ್ದಕ್ಕೆ 7 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ಹಾಗೂ ದಂಡ ಪಾವತಿಸಲು ತಪ್ಪಿದರೆ ಮೂರು ತಿಂಗಳ ಕಠಿಣ ಸಜೆ ಎಂದು ತೀರ್ಪು ನೀಡಿದೆ.

ಇನ್ನು ಮಂಗಳೂರಿನ ಒಂದನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ಭಟ್ ವಿಚಾರಣೆ ನಡೆಸಿ ನಿತಿನ್ ತಪ್ಪಿತಸ್ಥ ಎಂದು ಘೋಷಿಸಿದ್ದು, ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಸಿ. ವೆಂಕಟರಮಣ ಸ್ವಾಮಿ ವಾದಿಸಿದ್ದರು.

ನಿತಿನ್ ವೃತ್ತಿಯಲ್ಲಿ ಖಾಸಗಿ ಬಸ್ ಕಂಡಕ್ಟರ್ ಆಗಿದ್ದು, ಬಸ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದ 17 ವರ್ಷದ ವಿದ್ಯಾರ್ಥಿನಿಯ ಪರಿಚಯವಾಗಿದ್ದು, ಬಳಿಕ 2014 ಜುಲೈ 24ರಂದು ಆತ ಆಕೆಯನ್ನು ಪುತ್ತೂರಿಗೆ ಬರುವಂತೆ ಹೇಳಿ ಅದರಂತೆ ಬಾಲಕಿ ಕಾಲೇಜಿಗೆ ತೆರಳುವುದಾಗಿ ಮನೆಯಲ್ಲಿ ಹೇಳಿ ಹೊರಟಿದ್ದಳು. ಹಾಗೆ ಪುತ್ತೂರಿನಲ್ಲಿ ಇಬ್ಬರೂ ಭೇಟಿಯಾಗಿ ಆತ ಆಕೆಯನ್ನು ಮೊದಲು ಕಟೀಲಿಗೆ ಹಾಗೂ ಬಳಿಕ ಅಲ್ಲಿಂದ ಮಂಗಳೂರಿಗೆ ಕರೆದೊಯ್ದು ರಾತ್ರಿ ವೇಳೆ ಕೆ ಎಸ್ ಆರ್ ಟಿಸಿ ಸ್ಲೀಪರ್ ಬಸ್ಸಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಆಗಿನ ವಿಟ್ಲ ಎಸೈ ರಾಘವೇಂದ್ರ ಅವರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಎಎಸ್ಪಿ ರಶ್ಮಿ ಪರಡ್ಡಿ, ಬಂಟ್ವಾಳ ಉಪವಿಭಾಗದ ಎಎಸ್ಪಿ ರಾಹುಲ್ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!