November 22, 2024

ಭಾರತದ ಮಿಲಿಟರಿ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪಿಯ ಮೊಬೈಲ್ ನಲ್ಲಿ ಮಹತ್ವದ ಮಾಹಿತಿ ಪತ್ತೆ

0

ಬೆಂಗಳೂರು: ನಗರದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಪಾಕಿಸ್ತಾನದ ಐಎಸ್‌ಐ ಏಜೆನ್ಸಿಗೆ ಭಾರತದ ಮಿಲಿಟರಿ ಪ್ರದೇಶದ ಪೋಟೋಗಳನ್ನು ರವಾನಿಸಿದ ಆರೋಪದಡಿ ಕಳೆದ ಎರಡು ತಿಂಗಳ ಹಿಂದೆ ಮಿಲಿಟರಿ ಗುಪ್ತಚರ ವಿಭಾಗದ ದಕ್ಷಿಣ ಕಮಾಂಡೋ ತಂಡ ಹಾಗೂ ಬೆಂಗಳೂರು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದ ಆರೋಪಿ ಜಿತೇಂದ್ರ ಸಿಂಗ್‌ನ ಮೊಬೈಲನ್ನು ಎಫ್‌ಎಸ್‌ಎಲ್‌ನಲ್ಲಿ ಪರಿಶೀಲನೆ ನಡೆಸಿದಾಗ ಹಲವು ಮಹತ್ವದ ಸಂಗತಿಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್‌ನನ್ನು ನಗರದ ಕಾಟನ್‌ ಪೇಟೆಯಲ್ಲಿ ಎರಡು ತಿಂಗಳ ಹಿಂದೆ ಬಂಧಿಸಲಾಗಿತ್ತು. ರಾಜಸ್ಥಾನದ ಬಾರ್ಮರ್‌ ಮಿಲಿಟರಿ ಗಡಿ ಪ್ರದೇಶದ ಛಾಯಾಚಿತ್ರ ಹಾಗೂ ಮಿಲಿಟರಿ ವಾಹನಗಳ ಛಾಯಾಚಿತ್ರಗಳನ್ನು ಪಾಕಿಸ್ತಾನದ ಏಜೆನ್ಸಿಗೆ ಕಳುಹಿಸಿದ ಆರೋಪದಡಿ ಮಿಲಿಟರಿ ಗುಪ್ತಚರ ವಿಭಾಗದ ದಕ್ಷಿಣ ಕಮಾಂಡೋ ತಂಡ ಹಾಗೂ ಬೆಂಗಳೂರು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸೆ. 20 ರಂದು ಕಾಟನ್‌ ಪೇಟೆಯಲ್ಲಿ ಬಂಧಿಸಿದ್ದರು.

ಈ ವೇಳೆ ಆರೋಪಿಯಿಂದ ಮಿಲಿಟರಿ ಡ್ರೆಸ್‌ಗಳು ಹಾಗೂ ಒಂದು ಮೊಬೈಲ್‌ ಫೋನ್‌ ವಶಪಡಿಸಿಕೊಳ್ಳಲಾಗಿತ್ತು. ಮೊಬೈಲನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಇದೀಗ ಮೊಬೈಲ್‌ ರಿಟ್ರೈವ್‌ ಮಾಡಿದ ವೇಳೆ ಅದರಲ್ಲಿ 20 ಕ್ಕೂ ಅಧಿಕ ಯುವತಿಯರ ಫೋಟೋಗಳು ಪತ್ತೆಯಾಗಿವೆ. ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್‌ ಮೂಲಕ ಯುವತಿಯರ ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿ, ನಂತರ ಅವರ ಪೋಟೊಗಳನ್ನು ತನ್ನ ಮೊಬೈಲ್‌ನಲ್ಲಿ ಸಂಗ್ರಹ ಮಾಡಿಕೊಳ್ಳುತ್ತಿದ್ದ. ಬಳಿಕ ಅವರ ನಂಬರ್‌ನ್ನು ಪಡೆದು ಚಾಟಿಂಗ್‌ ಮಾಡುತ್ತಿದ್ದ. ಹೀಗೆ ಹಲವು ಯುವತಿಯರ ಜತೆಗೆ ಚಾಟ್‌ ಮತ್ತು ಕರೆ ಮಾಡಿ ಮಾತನಾಡಿರುವುದು ಪತ್ತೆಯಾಗಿದೆ.

Leave a Reply

Your email address will not be published. Required fields are marked *

error: Content is protected !!