ಬಸ್ಸುಗಳ ನಡುವೆ ಭೀಕರ ಅಪಘಾತ: ಮದುವೆ ಮುಗಿಸಿ ಮನೆಗೆ ತೆರಳುತ್ತಿದ್ದ 12 ಮಂದಿ ಮೃತ್ಯು
ಭುವನೇಶ್ವರ: ಎರಡು ಬಸ್ಸುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮದುವೆ ಮುಗಿಸಿ ಮನೆಗೆ ತೆರಳುತ್ತಿದ್ದ 12 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಡಿಶಾದಿಂದ ಸುಮಾರು 35 ಕಿಮೀ ದೂರದಲ್ಲಿರುವ ಬರ್ಹಾಂಪುರ-ತಪ್ತಪಾಣಿ ರಸ್ತೆಯ ದಿಗಪಹಂಡಿ ಪ್ರದೇಶದ ಬಳಿ ಭಾನುವಾರ ತಡರಾತ್ರಿ ಅಪಘಾತ ಸಂಭವಿಸಿದೆ ಎಂದು ಬರ್ಹಾಂಪುರ ಪೊಲೀಸ್ ವರಿಷ್ಠಾಧಿಕಾರಿ ಎಂ. ಶರವಣ ವಿವೇಕ್ ತಿಳಿಸಿದ್ದಾರೆ.
ಬರ್ಹಾಂಪುರದಲ್ಲಿ ವಿವಾಹಮಹೋತ್ಸವ ಮುಗಿಸಿಕೊಂಡು ಪ್ರಯಾಣಿಕರು ದಿಗಪಹಂಡಿ ಬಳಿಕ ಖಂಡದೇಲಿಗೆ ಹಿಂದಿರುಗುತ್ತಿದ್ದರು, ಈ ವೇಳೆ ಅಪಘಾತ ಸಂಭವಿಸಿದೆ. ಇದರಲ್ಲಿ ಒಂದೇ ಕುಟುಂಬದ 7 ಮಂದಿ ಸೇರಿ 12 ಮಂದಿ ಮೃತಪಟ್ಟಿದ್ದಾರೆ.
7 ಮಂದಿ ಗಾಯಗೊಂಡಿದ್ದು, ಅವರನ್ನ ಎಂಕೆಸಿಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.




