ಸರ್ಕಾರಿ ಬಸ್‌ಗೆ ಕಲ್ಲು ಎಸೆದ ಮಹಿಳೆ: 5 ಸಾವಿರ ರೂ. ದಂಡ
ಕೊಪ್ಪಳ: ಕೊಪ್ಪಳದಿಂದ ಹೊಸಪೇಟೆಗೆ ಹೋಗುತ್ತಿದ್ದ ಬಸ್‌ಗಳು ತಾಲ್ಲೂಕಿನ ಹೊಸ ಲಿಂಗಾಪುರ (ಹುಲಿಗಿ ಕ್ರಾಸ್) ಬಳಿ ನಿಲ್ಲಿಸದ ಕಾರಣ ರೊಚ್ಚಿಗೆದ್ದ ಮಹಿಳೆಯೊಬ್ಬರು ಸರ್ಕಾರಿ ಬಸ್‌ಗೆ ಕಲ್ಲು ಎಸೆದಿದ್ದಾರೆ.
ಬಸ್‌ನ ಚಾಲಕ ಕಂ ನಿರ್ವಾಹಕ ಮುಕ್ಕಣ್ಣ ಕುಕನೂರು ಅವರು ಕಲ್ಲು ಎಸೆದ ಮಹಿಳೆಯನ್ನು ಎಲ್ಲ ಪ್ರಯಾಣಿಕರ ಸಮೇತ ಬಸ್ ಅನ್ನು ಮುನಿರಾಬಾದ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಮಹಿಳೆಯಿಂದ ₹5 ಸಾವಿರ ದಂಡ ಕಟ್ಟಿಸಿಕೊಂಡು ವಾಪಸ್ ಕಳುಹಿಸಿದ್ದಾರೆ. ಈ ಬಸ್ ಹೊಸಪೇಟೆ ಡಿಪೊಕ್ಕೆ ಸೇರಿದ್ದಾಗಿದೆ.
ಇಳಕಲ್ ಬಳಿ ಪಾಪನಳ್ಳಿ ಗ್ರಾಮದ ಲಕ್ಷ್ಮಿ ಎಂಬುವರು ಜಿಲ್ಲೆಯ ಹುಲಿಗಿಯಲ್ಲಿ ಹುಲಿಗೆಮ್ಮದೇವಿ ದರ್ಶನ ಪಡೆಯಲು ಬಂದಿದ್ದರು. ಬಸ್‌ಗಾಗಿ ಹುಲಿಗಿ ಕ್ರಾಸ್ ಬಳಿ ಬಹಳಷ್ಟು ಹೊತ್ತಿನಿಂದ ಕಾಯುತ್ತಿದ್ದರೂ ಬಸ್‌ಗಳು ನಿಲ್ಲಿಸಿರಲಿಲ್ಲ. ಭಾನುವಾರ ಈ ಘಟನೆ ನಡೆದಿದ್ದು ಮಧ್ಯಾಹ್ನ ಮಳೆಯೂ ಇದ್ದ ಕಾರಣ ಜನ ಬಸ್‌ಗಾಗಿ ಪರದಾಡುತ್ತಿದ್ದ ಚಿತ್ರಣವೂ ಹುಲಿಗಿಯಲ್ಲಿ ಕಂಡು ಬಂದಿತ್ತು.
‘ನನ್ನ ಮುಂದೆಯೇ ಹಲವು ಬಸ್‌ಗಳು ಹೋದರೂ ನಿಲ್ಲಿಸಲಿಲ್ಲ. ಮಳೆ ಕೂಡ ಬರುತ್ತಿತ್ತು. ಇಳಕಲ್‌ಗೆ ಹೋಗುವ ಬಸ್‌ಗಾಗಿ ನಾಲ್ಕೈದು ತಾಸಿನಿಂದ ಕಾದಿದ್ದೆ. ಬಸ್ ನಿಲ್ಲಿಸದ ಕಾರಣ ಸಿಟ್ಟು ಬಂದು ಕಲ್ಲು ಎಸೆದೆ’ ಎಂದು ಲಕ್ಷ್ಮಿ ಹೇಳಿದ್ದಾರೆ.
ಹೊಸಪೇಟೆ ಡಿಪೊ ವ್ಯವಸ್ಥಾಪಕ ಬಸ್‌ನ ಗಾಜು ಒಡೆದಿದ್ದಕ್ಕೆ ₹5,000 ದಂಡ ಕಟ್ಟಬೇಕು, ಇಲ್ಲವಾದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಬಳಿಕ ಮಹಿಳೆ ಕ್ಷಮೆಯಾಗಿಸಿ ದಂಡ ಕಟ್ಟಿ ಅದೇ ಬಸ್‌ನಲ್ಲಿ ಪ್ರಯಾಣಿಸಿದ್ದಾಳೆ.




