ಪುತ್ತೂರು: ಸರ್ಕಾರಿ ಬಸ್ ನಲ್ಲಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ: ಆರೋಪಿಯ ಬಂಧನ
ಪುತ್ತೂರು: ಪುತ್ತೂರಿನಲ್ಲಿ ಸರ್ಕಾರಿ ಬಸ್ ನಲ್ಲಿ ಮಹಿಳೆಯೊಂದಿಗೆ ಸಹ ಪ್ರಯಾಣಿಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಸಂಬಂಧ ಆರೋಪಿ ಕೆಮ್ಮಂಜೆಯ ಸುಬ್ರಹ್ಮಣ್ಯ ಭಟ್ ನನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಆರೋಪಿ ಮಹಿಳೆಯ ದೂರು ಆಧಾರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಹಾಯಕ ಅರ್ಚಕನಾಗಿ ಕೆಲಸ ಮಾಡುತ್ತಿರುವ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಸದ್ಯ ನ್ಯಾಯಾಲಯ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.. ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಕನ್ಯಾನದ ಶಹನಾಜ್ ಎಂಬ ಮಹಿಳೆ ದೂರು ನೀಡಿದ್ದರು.
ಉಪ್ಪಳದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಪುತ್ತೂರು ನಗರದ ಹೊರವಲಯದ ಕಬಕ ಗ್ರಾಮದ ಮುರ ಎಂಬಲ್ಲಿ ವ್ಯಕ್ತಿ ಅಸಭ್ಯವಾಗಿ ವರ್ತಿಸಿ ಮೈ ಮುಟ್ಟಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು.
ಮಹಿಳೆ ಗುರುವಾರ ತನ್ನ ತಾಯಿಯೊಂದಿಗೆ ಉಪ್ಪಳದಿಂದ ಪುತ್ತೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಪುತ್ತೂರಿಗೆ ಪ್ರಯಾಣಿಸುತ್ತಿದ್ದರು.
ಈ ವೇಳೆ, ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಸೀಟಿನ ಮಧ್ಯದಲ್ಲಿ ಕೈ ಹಾಕಿ ಹಿಂಬದಿ ಸೊಂಟದ ಕೆಳ ಭಾಗವನ್ನು ಹಿಡಿದು ಅಶ್ಲೀಲವಾಗಿ ವರ್ತಿಸಿದ್ದಾನೆ.
ಯಾಕೆ ಈ ರೀತಿಯಾಗಿ ವರ್ತಿಸುತ್ತಿದ್ದಾರ? ಎಂದು ಪ್ರಶ್ನಿಸಿದ್ದಂತೆಯೇ ಆತ ಬೊಳುವಾರಿನಲ್ಲಿ ಬಸ್ನಿಂದ ಇಳಿದು ಹೋಗಿದ್ದಾನೆ ಎಂದು ಶಹನಾಜ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು.




