ಉಳ್ಳಾಲ: ಒಂದೇ ತಿಂಗಳಿಗೆ 7,71,072 ವಿದ್ಯುತ್ ಬಿಲ್: ಮನೆ ಮಾಲಕನಿಗೆ ಶಾಕ್
ಉಳ್ಳಾಲ: ಇಲ್ಲಿನ ಮನೆ ಮಾಲಕನ ಕೈಗೆ ವಿದ್ಯುತ್ ರೀಡರ್ ನೀಡಿದ ಬಿಲ್ ನೋಡಿ ಮನೆ ಮಾಲಕನೇ ಹೌಹಾರಿದ ಘಟನೆ ನಡೆದಿದೆ.
ಉಳ್ಳಾಲಬೈಲ್‌ನ ಸದಾಶಿವ ಆಚಾರ್ಯ ಅವರ ಮನೆಗೆ ಜೂ.14 ರಂದು ಬಂದ ಬಿಲ್ ರೀಡರ್ 7,71,072 ಬಿಲ್ ನೀಡಿ ತೆರಳಿದ್ದಾರೆ. 7 ಲಕ್ಷ ರೂ ಬಿಲ್ ನೋಡಿದ, ಮನೆಮಂದಿ ಆತನಲ್ಲಿ ವಿಚಾರಿಸಿದಾಗ “ಅದೆಲ್ಲ ನನಗೆ ಗೊತ್ತಿಲ್ಲ ಮೆಸ್ಕಾಂ ಕಚೇರಿಗೆ ಹೋಗಿ ವಿಚಾರಿಸಿ” ಎಂದು ಉತ್ತರ ನೀಡಿದ್ದಾನೆ.
ತಮಗೆ ಈ ಮೊದಲು 3,000 ರೂ. ದಷ್ಟು ಮಾಸಿಕ ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ ಈ ಬಾರಿ ಒಟ್ಟು 99,338 ಯೂನಿಟ್ ಖರ್ಚಾಗಿದ್ದು 7,71,072 ರೂ. ಬಿಲ್ ನಮೂದಿಸಲಾಗಿದೆ. “ನಾವು ಪ್ರತಿ ತಿಂಗಳು ಬಿಲ್ಲನ್ನ ಕಟ್ಟುತ್ತೇವೆ. ಈ ತಿಂಗಳು ಬಂದ ಬಿಲ್ ನೋಡಿ ಶಾಕ್ ಆಗಿದ್ದೆವು ಎಂದು ಮನೆ ಮಾಲಕ ಸದಾಶಿವ ಆಚಾರ್ಯ ಮಾಧ್ಯಮಗಳಿಗೆ ಹೇಳಿದ್ದಾರೆ.
ಈ ಬಗ್ಗೆ ಉಳ್ಳಾಲ ಉಪವಿಭಾಗ ಮೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ ಅವರಲ್ಲಿ ವಿಚಾರಿಸಿದಾಗ “ಏಜೆನ್ಸಿಗಳ ಮುಖಾಂತರ ಬಿಲ್ ಕಲೆಕ್ಷನ್ ಮಾಡಲಾಗುತ್ತದೆ. ಬಿಲ್ ರೀಡರ್ ಎಡವಟ್ಟಿನಿಂದ ತಪ್ಪಾಗಿ ವಿದ್ಯುತ್ ಬಿಲ್ ಮುದ್ರಣ ಆಗಿದೆ” ಎಂದರು. ನಿನ್ನೆ ಮಧ್ಯಾಹ್ನದ ವೇಳೆ ಪರಿಷ್ಕೃತ 2,833 ರೂ. ಬಿಲ್ ಆಚಾರ್ಯ ಅವರ ಮನೆ ತಲುಪಿದೆ.




