ಚಾಕುವಿನಿಂದ ಇರಿದು ಯುವಕನ ಹತ್ಯೆ
ಬಾಗಲಕೋಟೆ: ಕರ್ನಾಟಕದಲ್ಲಿ ಸದ್ಯ ದಸರಾ ನವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದೆ. ದಸರಾ ಪ್ರಯುಕ್ತ ಜನರು ದಾಂಡಿಯಾ ನೃತ್ಯದಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಸಂಭ್ರಮದ ಮಧ್ಯೆ ಜಿಲ್ಲೆಯ ಮುಧೋಳದ ವಿನಾಯಕ ನಗರದಲ್ಲಿ ಚಾಕು ಇರಿದು ಯುವಕನನ್ನ ಕೊಲೆ ಮಾಡಿರುವ ಘಟನೆ ನಡೆದಿದೆ. ಶ್ರೀನಿವಾಸ ಕದರಿ ಎಂಬುವವನಿಂದ ನಿತಿನ್ ನಿಂಬಾಳ್ಕರ್(25)ನ ಹತ್ಯೆ ಮಾಡಲಾಗಿದೆ. ಸಂಜು ಎಂಬುವವನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಧೋಳ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
ದಸರಾ ಪ್ರಯುಕ್ತ ವಿನಾಯಕ ನಗರದಲ್ಲಿ ದಾಂಡಿಯಾ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಶ್ರೀನಿವಾಸ್ ಕದರಿ ಎಂಬ 22 ವರ್ಷದ ಯುವಕ ಬಂದಿದ್ದಾನೆ. ಈತ ಮದ್ಯ ಹಾಗೂ ಗಾಂಜಾ ಮತ್ತಿನಲ್ಲಿ ತೇಲಾಡುತ್ತಿದ್ದ ಎನ್ನಲಾಗಿದೆ. ದಾಂಡಿಯಾ ನೃತ್ಯ ಮಾಡುತ್ತಿದ್ದ ಯುವತಿಯರನ್ನು ಚುಡಾಯಿಸುತ್ತಿದ್ದ. ಅಲ್ಲದೇ ಪೂಜೆ ಮಾಡುತ್ತಿದ್ದ ಯುವಕರೊಂದಿಗೂ ಕಿರಿಕ್ ಮಾಡಿದ್ದಾನೆ.
ಆಗ ಅಲ್ಲಿದ್ದ ನಿತಿನ್ ನಿಂಬಾಳ್ಕರ್, ‘ಇಲ್ಲಿಂದ ಹೋಗು’ ಎಂದು ಶ್ರೀನಿವಾಸ್ಗೆ ಎಚ್ಚರಿಕೆ ನೀಡಿದ್ದಾನೆ. ಆದರೂ ಮತ್ತೆ ಹಾಗೆ ಮಾಡಿದ್ದು, ನಿತಿನ್ ಒಂದೇಟು ಹೊಡೆದು ಕಳಿಸಿದ್ದಾನೆ. ಅಲ್ಲಿಂದ ತನ್ನ ಏರಿಯಾಗೆ ಹೋದ ಶ್ರೀನಿವಾಸ್, ಸ್ನೇಹಿತರಾದ ಸಂಪತ್ ಮತ್ತು ಪ್ರದೀಪ್‌ನನ್ನು ಕರೆದುಕೊಂಡು ಬಂದು ಪುನಃ ನಿತಿನ್ ಜೊತೆ ಜಗಳ ಮಾಡಿದ್ದಾರೆ. ನೋಡನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ತಿರುಗಿದ್ದು, ಚಾಕುವಿನಿಂದ ನಿತಿನ್ ಎದೆ, ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾರೆ.




