ವಿಟ್ಲ ಪಡ್ನೂರು: ರಸ್ತೆಯನ್ನು ಅಗೆದು ಕಾಮಗಾರಿ ಸ್ಥಗಿತಗೊಳಿಸಿದ ಆರೋಪ: ಕಾಮಗಾರಿ ಮತ್ತೆ ಪ್ರಾರಂಭಿಸುವಂತೆ ಸಾರ್ವಜನಿಕರಿಂದ ರಸ್ತೆ ತಡೆದು ಪ್ರತಿಭಟನೆ
ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ -ಪಳ್ಳಿಗದ್ದೆ -ಪಂಜಿಗದ್ದೆ ಸಂಪರ್ಕ ರಸ್ತೆಯನ್ನು ದುರಸ್ತಿ ನೆಪದಲ್ಲಿ ಸುಮಾರು ಮೂರು ತಿಂಗಳುಗಳ ಹಿಂದೆ ಅಗೆದು ಜಲ್ಲಿ ಹಾಕಿ ದಿಢೀರನೆ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ವಾಹನ ಸಂಚಾರಯೋಗ್ಯವಿದ್ದ ರಸ್ತೆಯನ್ನು ವಾಹನ ಸಂಚಾರಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಮಾಡಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.
ಇದರಿಂದ ಸಾರ್ವಜನಿಕರು ಸಂಕಷ್ಟ ಪಡುವಂತಾಗಿದ್ದು,
ರಸ್ತೆ ಅಗೆದು ಹಾಕಿದ ಪರಿಣಾಮ
ಕಿಡ್ನಿ ಸಂಬಂದಿ ಕಾಯಿಲೆಯಿಂದ ಡಯಾಲಿಸಿಸ್ ಮಾಡುವ ರೋಗಿಗಳು, ಶಾಲಾ ಮಕ್ಕಳು ಹಾಗೂ ಈ ರಸ್ತೆ ಮೂಲಕ ಹಾದು ಹೋಗುವಂತಹ ಇನ್ನಿತರ ವಾಹನ ಚಾಲಕರೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅದಲ್ಲದೆ ಅಗೆದುಹಾಕಿದ ಕಾರಣ ಚರಂಡಿ ವ್ಯವಸ್ಥೆ ಸರಿ ಇಲ್ಲದೆ ಮೊದಲನೇ ಮಳೆಗೆ ರಸ್ತೆಗೆ ಹಾಕಿದ ಜಲ್ಲಿ ಮತ್ತು ಮಣ್ಣು ಹತ್ತಿರ ವಾಸವಿರುವ ಮನೆಯಂಗಳಕ್ಕೆ ಬರುವಂತಾಗಿದೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮುಂದಿನ ದಿನಗಳಲ್ಲಿ ಮಳೆನೀರು ಹರಿದು ಜಲ್ಲಿ ಮಣ್ಣು ಕೊಚ್ಚಿಹೋಗುವ ಸಾಧ್ಯತೆ ಇದೆ.
ಈ ಮೊದಲು ಸಾರ್ವಜನಿಕ ರಾದ ನಾವು ಪಂಚಾಯತ್ ಅಧ್ಯಕ್ಷರನ್ನು ಸಂಪರ್ಕಿಸಿದಾಗ ಈ ರಸ್ತೆ ಇರುವ ಭಾಗದಲ್ಲಿ ಮತದಾನ ಕೇಂದ್ರ ಇರುವ ಕಾರಣ ತಾತ್ಕಾಲಿಕ ವಾಗಿ ಕಾಮಗಾರಿ ಸ್ಥಗಿತಗೊಳಿಸಿದ್ದು ಕಾಮಗಾರಿ ಪುನರಾರಂಭ ಮಾಡುವುದಾಗಿ ತಿಳಿಸಿದ್ದರು.
ಆದರೆ ಕಾಮಗಾರಿ ಪುನರಾರಂಭ ಮಾಡದ ಕಾರಣ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.