ಬಂಟ್ವಾಳ: ಮನೆಗೆ ನುಗ್ಗಿ ಮಹಿಳೆಯರ ಮೇಲೆ ದೌರ್ಜನ್ಯ, ಧಾಂದಲೆ:
ಕೋರೆ ಮಾಲಿಕ ಸಹಿತ ಮೂವರ ವಿರುದ್ದ ಪ್ರಕರಣ ದಾಖಲು
ಬಂಟ್ವಾಳ: ಗಂಡ- ಹೆಂಡತಿಯ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಸೀರೆ ಎಳೆದಾಡಿ ರಾತ್ರೋರಾತ್ರಿ ಮನೆಯಲ್ಲಿ ದಾಂಧಲೆ ನಡೆಸಿ ದೌರ್ಜನ್ಯ, ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಘಟನೆ ಸಂಭವಿಸಿದೆ.
ಈ ಬಗ್ಗೆ ಬರಿಮಾರು ಗ್ರಾಮದ ಖಾದರ್ ಎಂಬವರು ಬಂಟ್ವಾಳ ಠಾಣೆಯಲ್ಲಿ ಮೂವರ ವಿರುದ್ದ ದೂರು ನೀಡಿದ್ದಾರೆ. ಮನೆಗೆ ನುಗ್ಗಿ ದಾಂಧಲೆ ನಡೆಸಿದ ಆರೋಪಿಗಳನ್ನು ಎಂ.ಎಂ. ಕುಂಞ, ಸಮೀರ್, ಹಮೀದ್, ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ದೂರು ನೀಡಿದ ಖಾದರ್ ಅವರ ತಮ್ಮ ಮಹಮ್ಮದ್ ಎಂಬವರಿಗೆ ದೇರಳಕಟ್ಟೆಯ ಉರುಮನೆಯ ಎಂ.ಎಂ. ಕುಂಞರವರ ಮಗಳು ಬುಶ್ರಾ ಎಂಬವರ ಜೊತೆ ವಿವಾಹವಾಗಿದ್ದು, ಬುಶ್ರಾ ಎರಡು ತಿಂಗಳ ಹಿಂದೆಯೇ ಗಂಡನ ಮನೆಬಿಟ್ಟು ತವರು ಮನೆಗೆ ಹೋದವಳು ವಾಪಸ್ ಗಂಡನ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಬುಶ್ರಾಳ ಗಂಡ ಮಹಮ್ಮದ್ ಬಂಟ್ವಾಳ ಪೊಲೀಸರಿಗೆ ದೂರನ್ನು ನೀಡಿದ್ದರು, ಗಂಡ- ಹೆಂಡತಿ ವಿಚಾರವಾದ್ದರಿಂದ ಪೊಲೀಸರು ಏಕಾ ಏಕಿ ಪ್ರಕರಣ ದಾಖಲಿಸದೆ ಕೌನ್ಸಿಲಿಂಗ್ ನಡೆಸುವ ಕುರಿತು ಅರ್ಜಿಯ ವಿಚಾರಣೆ ಹಂತದಲ್ಲಿರುವ ಸಂದರ್ಭದಲ್ಲಿ ಬುಶ್ರಾ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರನ್ನು ನೀಡಿದ್ದರು.
ಆದಿತ್ಯವಾರ ಬೆಳಗಿನ ಜಾವ 4 ಗಂಟೆಗೆ ಬುಶ್ರಾಳ ತಂದೆ ಎಂ.ಎಂ.ಕುಂಞ, ಅಣ್ಣ ಸಮೀರ್, ಚಿಕ್ಕಪ್ಪ ಹಮೀದ್ ಸೇರಿಕೊಂಡು ಖಾದರ್ ಅವರ ಮನೆಗೆ ಬಂದು ಕಾಲಿಂಗ್ ಬೆಲ್ ಹಾಕಿದ್ದು ಮನೆಯ ಒಳಗಡೆ ಮಲಗಿದ್ದ ಖಾದರ್ ಅವರನ್ನು ಅವರ ಪತ್ನಿ ಎಬ್ಬಿಸಿ ಯಾರೋ ಕಾಲಿಂಗ್ ಬೆಲ್ ಮಾಡುತ್ತಿದ್ದಾರೆ ಎಂದಾಗ ಮನೆಯ ಬಾಗಿಲು ತೆಗೆದಾಗ ಏಕಾಏಕಿ ಮನೆಯ ಒಳಗ್ಗೆ ನುಗ್ಗಿ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡುತ್ತಿದ್ದ ಆರೋಪಿಗಳು, ಬೆಳಗಿನ ಜಾವ ಮನೆಗೆ ಬಂದು ಏನು ಗಲಾಟೆ ಮಾಡುತ್ತೀರಿ ಎಂದು ಖಾದರ್ ಅವರ ಮನೆಯ ಮಹಿಳೆಯರು ಕೇಳಿದಾಗ ಮಹಮ್ಮದ್ ಎಲ್ಲಿ ಎಂದು ಕೇಳುತ್ತಾ ಅವ್ಯಾಚ ಶಬ್ದಗಳಿಂದ ಬೈದು ಕುಂಞ ಹಾಗೂ ಹಮೀದ್ ಎಂಬವರು ಮಹಿಳೆಯ ಸೀರೆಯನ್ನು ಎಳೆದಾಡಿ ದೌರ್ಜನ್ಯ ನಡೆಸಿ ದಾಂಧಲೆ ಮಾಡಿದ್ದು, ಮಹಿಳೆಯರಲ್ಲಿ ಗಲಾಟೆ ಮಾಡಬೇಡಿ ಎಂದು ಕಣ್ಣೀರು ಹಾಕಿ ಕೇಳಿದರೂ ಕೂಡ ನೆರೆ ಮನೆಯ ಹಮೀದ್ ಎಂಬವರು ಬಿಡಿಸಲು ಬಂದಾಗ ಅವರನ್ನು ಕೂಡಾ ಧರಧರನೆ ಎಳೆದುಕೊಂಡು ಆರೋಪಿಗಳು ಬಂದಿದ್ದ ಇನ್ನೋವಾ ಕೆಎ 19 ಎಂಇ 8957 ಕಾರಿನಲ್ಲಿ ಕುಳ್ಳಿರಿಸಿ ಹಲ್ಲೆ ನಡೆಸಿದ್ದು ಎರಡು ದಿನದ ಒಳಗಡೆ ಮಹಮ್ಮದ್ ನನ್ನು ಹುಡುಕಿ ಕೊಡದಿದ್ದರೆ ನಿಮ್ಮ ಕುಟುಂಬದವರನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಮಹಿಳೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ದಾಂಧಲೆ ನಡೆಸಿದ ಆರೋಪಿಗಳ ವಿರುದ್ದ ಕಲಂ 504,506,448,354(ಬಿ),323 34 ಐಪಿಸಿ ಯಂತೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಲಾಗಿದೆ.





