ಬೆಳ್ತಂಗಡಿ: ಸಾಕಲು ದನಗಳನ್ನು ಕೊಂಡೊಯ್ಯುತ್ತಿದ್ದ ರೈತನ ಮೇಲೆ ತಂಡದಿಂದ ಹಲ್ಲೆ:
ಇತ್ತಂಡಗಳ ವಿರುದ್ದ ಪ್ರಕರಣ ದಾಖಲು
ಬೆಳ್ತಂಗಡಿ: ಹೈನುಗಾರಿಕೆಗಾಗಿ ದನಗಳನ್ನು ಖರೀದಿಸಿ ಕೊಂಡೊಯ್ಯುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರೆನ್ನಲಾದ ತಂಡವೊಂದು ವಾಹನವನ್ನು ಅಡ್ಡಗಟ್ಟಿ ಹಲ್ಲೆ ನಡೆಸಿರುವ ಘಟನೆ ಕಡಿರುದ್ಯಾವರ ಗ್ರಾಮದ ಅಂಜನೊಟ್ಟು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡಿಗೆರೆ ತಾಲೂಕಿನ ಹರೀಶ್ ಹಲ್ಲೆಗೊಳಗಾದವರು. ಇವರು ತಮ್ಮ ಮನೆಗೆಂದು ಎರಡು ದನಗಳನ್ನು ಹಾಗೂ ಒಂದು ಕರುವನ್ನು ಕಡಿರುದ್ಯಾವರದ ಶೀನಪ್ಪ ಪೂಜಾರಿ ಎಂಬವರ ಮನೆಯಿಂದ ಮಂಗಳವಾರ ಖರೀದಿಸಿಕೊಂಡು ಹೋಗುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಹರೀಶ್ ಅವರ ಕಾರನ್ನು ಹಾಗೂ ದನಗಳನ್ನು ಹೇರಿಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನವನ್ನು ತಡೆದ ಅಪರಿಚಿತರ ತಂಡ ಟಾಟಾ ಏಸ್ ವಾಹನದ ಚಾಲಕ ಬಸವರಾಜು ಹಾಗೂ ಹರೀಶ್ ಮೇಲೆ ಹಲ್ಲೆ ನಡೆಸಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ದನಗಳನ್ನು ಸಾಕಲು ಕೊಂಡು ಹೋಗುತ್ತಿರುವುದಾಗಿ ಮನವರಿಕೆ ಮಾಡಿದರೂ ಕಿವಿಗೊಡದ ತಂಡ ತೀವ್ರವಾಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದೆ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದನ ಸಾಗಾಟಗಾರನ ಮೇಲೂ ಪ್ರಕರಣ ದಾಖಲು:
ಇದೇ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಕೇಸು ದಾಖಲಾಗಿದೆ. ಸೂಕ್ತವಾದ ದಾಖಲೆಗಳಿಲ್ಲದೆ ದನಗಳನ್ನು ಸಾಗಾಟ ಮಾಡಿದ ಆರೋಪದಲ್ಲಿ ಬಸವರಾಜ್, ಅವಿನಾಶ್, ಹರೀಶ್, ಜಿ.ಎಸ್.ಹರೀಶ್, ಶೀನ ಪೂಜಾರಿ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ಇವರಿಂದ ಕಾರು ಹಾಗೂ ದನಗಳ ಸಹಿತ ಸಾಗಾಟಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.





