ಭಾರತೀಯ ಮೂಲದ ಅಜಯ್ ಬಂಗಾ ವಿಶ್ವ ಬ್ಯಾಂಕ್ ನೂತನ ಅಧ್ಯಕ್ಷ
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕ ನಿವಾಸಿ ಅಜಯ್ ಬಂಗಾ ವಿಶ್ವ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜೂನ್ 2 ರಿಂದ ಮುಂದಿನ 5 ವರ್ಷಗಳವರೆಗೆ ಅಧ್ಯಕ್ಷರಾಗಿ ಇರಲಿದ್ದಾರೆ. ಬಂಗಾ ಅವರು ವಿಶ್ವಬ್ಯಾಂಕ್‌ನ 14ನೇ ಅಧ್ಯಕ್ಷರಾಗಲಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನಾಮನಿರ್ದೇಶನಗೊಂಡ ಡೇವಿಡ್ ಮಾಲ್ಪಾಸ್ ಅವರಿಂದ ಬಂಗಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರ ಅಧಿಕಾರಾವಧಿ ಮುಂದಿನ ತಿಂಗಳ ಮೊದಲ ವಾರದಲ್ಲಿ ಕೊನೆಯಾಗಲಿದೆ.
ಅಮೆರಿಕವೇ ವಿಶ್ವ ಬ್ಯಾಂಕ್ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ. 1944 ರಲ್ಲಿ ಯುರೋಪ್ ದೇಶಗಳೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಅವಕಾಶ ಆ ದೇಶಕ್ಕಿದೆ. ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಬಂಗಾ ಅವರ ಹೆಸರನ್ನು ಸೂಚಿಸುತ್ತಿರುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಫೆಬ್ರುವರಿಯಲ್ಲಿ ಪ್ರಕಟಿಸಿದ್ದರು. ಬಂಗಾ ಅವರಿಗೆ ಭಾರತ ಸರ್ಕಾರವು 2016ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿದೆ.
ಬಂಗಾ ಅವರ ಹಿಂದಿನ ಕೆಲಸಗಳನ್ನು ಶ್ಲಾಘಿಸಿರುವ ಕಮಲಾ, ಮುಂದಿನ ದಿನಗಳಲ್ಲಿ ಅವರಿಂದ ನಿರಂತರ ಕೆಲಸವನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.