ಪ್ರತಿಭಟನೆ ನಿರತ ಕುಸ್ತಿಪಟುಗಳನ್ನು ಭೇಟಿ ಮಾಡಿದ ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿಟಿ ಉಷಾ
ನವದೆಹಲಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನಡೆಸಿರುವ ಆರೋಪ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿಟಿ ಉಷಾ ಬುಧವಾರ ಭೇಟಿ ಮಾಡಿದ್ದಾರೆ.
ದೆಹಲಿಯ ಜಂತರ್ ಮಂತರ್ ನಲ್ಲಿ ಕಳೆದ 11 ದಿನಗಳಿಂದ ದೇಶದ ಪ್ರಮುಖ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಮೊದಲಾದವರು ಪ್ರತಿಭಟನೆ ಮಾಡುತ್ತಿದ್ದು ಪಿ ಟಿ ಉಷಾ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಕುಸ್ತಿಪಟುಗಳು WFI ಅಧ್ಯಕ್ಷರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುವ ಬದಲು ತಮ್ಮನ್ನು ಸಂಪರ್ಕಿಸಬೇಕಿತ್ತು ಎಂದು ಪಿ ಟಿ ಉಷಾ ಕಳೆದ ವಾರ ಪ್ರತಿಕ್ರಿಯೆ ನೀಡಿದ್ದರು. ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸಮಿತಿಯನ್ನು ಹೊಂದಿದೆ, ಬೀದಿಗಿಳಿದು ಪ್ರತಿಭಟನೆ ಮಾಡುವ ಬದಲು ಅವರು ನಮ್ಮ ಬಳಿಗೆ ಬರಬಹುದಿತ್ತು. ಆದರೆ ಅವರು ನಮ್ಮ ಸಮಿತಿಗೆ ಬಂದಿಲ್ಲ. ಇದು ಕುಸ್ತಿಪಟುಗಳಿಗೆ ಮಾತ್ರವಲ್ಲ, ಕ್ರೀಡಾಪಟುಗಳಿಗೆ ಉತ್ತಮ ನಡವಳಿಕೆಯಲ್ಲ ಎಂದು ಪಿ ಟಿ ಉಷಾ ಈ ಹಿಂದೆ ಹೇಳಿದ್ದರು.