ಶಾಸಕ ಯತ್ನಾಳ್ ಮತ್ತು ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗದಿಂದ ಶೋಕಾಸ್ ನೋಟಿಸ್ ಜಾರಿ
ಬೆಂಗಳೂರು: ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಚಿತ್ತಾಪುರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಪಿಯೂಷ್ ಗೋಯಲ್ ನೀಡಿದ ದೂರಿನ ಹಿನ್ನೆಲೆ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ಜಾರಿಯಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕರು ದೂರು ನೀಡಿದ ಕಾರಣ ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಮಾಡಿದ ಭಾಷಣದ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೂ ನೋಟಿಸ್ ಜಾರಿ ಮಾಡಲಾಗಿದೆ.
ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು ‘ನಾಲಾಯಕ್’ ಎಂದು ಕರೆದಿದ್ದರು. ಯತ್ನಾಳ್ ಅವರು ಸೋನಿಯಾ ಗಾಂಧಿ ‘ವಿಷಕನ್ಯೆಯೇ’ ಎಂದು ಪ್ರಶ್ನಿಸಿದ್ದರು. ರಾಹುಲ್ ಗಾಂಧಿ ಅವರನ್ನು ‘ಅರೆಹುಚ್ಚ: ಎಂದು ಕರೆದಿದ್ದರು. ಈ ಎಲ್ಲ ಕಾರಣಗಳಿಂದ ಯತ್ನಾಳ್ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ಬಂದಿದೆ.
ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿಗಳು ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಮೇ 4 ರೊಳಗೆ ಸ್ಪಷ್ಟನೆ ನೀಡಲು ಸೂಚನೆ ನೀಡಿದ್ದಾರೆ.