ಬೈಕ್ ನಲ್ಲಿ ಹೋಗುತ್ತಿದ್ದಾಗ ಮೈಮೇಲೆ ಬಿದ್ದ ಮರ: ಶಿಕ್ಷಕ ಸಾವು
ಮುದ್ದೇಬಿಹಾಳ: ಮರ ಮೈಮೇಲೆ ಮುರಿದು ಬಿದ್ದು ಕಲಾವಿದರೂ ಆಗಿದ್ದ ಶಿಕ್ಷಕ ಪ್ರಕಾಶ ವೀರಭದ್ರಪ್ಪ ಛಲವಾದಿ (35) ದುರಂತ ಸಾವನ್ನಪ್ಪಿರುವ ಘಟನೆ ಆಲಮಟ್ಟಿ ಮುಖ್ಯ ರಸ್ತೆಯ ಹುಲ್ಲೂರ ಗ್ರಾಮದ ಹಳ್ಳದ ಹತ್ತಿರ ರವಿವಾರ ಸಂಜೆ ನಡೆದಿದೆ.
ಬಾಗಲಕೋಟೆ ಜಮಖಂಡಿ ತಾಲೂಕು ಚಿಮ್ಮಡ ಗ್ರಾಮದವರಾಗಿದ್ದ ನಿಡಗುಂದಿಯಲ್ಲಿ ಮನೆ ಮಾಡಿ ಕುಟುಂಬ ಸಮೇತ ವಾಸವಿದ್ದ ವೀರಭದ್ರಪ್ಪ ಅವರು ಮುದ್ದೇಬಿಹಾಳ ತಾಲೂಕು ಸಿದ್ದಾಪೂರ ಪಿಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದು ಪ್ರಭಾರಿ ಮುಖ್ಯಾಧ್ಯಾಪಕ ರಾಗಿಯೂ ಜವಾಬ್ಧಾರಿ ನಿರ್ವಹಿಸುತ್ತಿದ್ದರು.
ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ರವಿವಾರ ಬೆಳಗ್ಗೆ ಗ್ರಾಮದಲ್ಲಿ ನಡೆದ ನಮ್ಮ ಮತ ನಮ್ಮ ಹಕ್ಕು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಮಧ್ಯಾಹ್ನ ಮುದ್ದೇಬಿಹಾಳದಲ್ಲಿ ನಡೆದ ಶಿಕ್ಷಕ ದಂಪತಿ ಬಿ.ವಿ.ಕೋರಿ ಮತ್ತು ಸರೋಜಾ ಕಿತ್ತೂರ ದಂಪತಿಯರ ಪುತ್ರಿಯ ಮದುವೆಯಲ್ಲಿ ಭಾಗವಹಿಸಿದ್ದರು.
ಸಂಜೆ ಜೋರಾಗಿ ಗಾಳಿ ಬೀಸುತ್ತಿದ್ದರೂ ಲೆಕ್ಕಿಸದೆ ಬೈಕ್ ಮೇಲೆ ನಿಡಗುಂದಿಗೆ ಹೊರಟಾಗ ಜೋರಾದ ಗಾಳಿಗೆ ಬೇವಿನ ಮರ ಮುರಿದು ಇವರ ಮೇಲೆ ಬಿದ್ದಿದೆ.





