ಶಾಲೆಗೆ ತೆರಳಬೇಕಿದ್ದ ಬಸ್ ತಪ್ಪಿತೆಂದು ಮನನೊಂದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
ಭೋಪಾಲ್: ಶಾಲೆಗೆ ತೆರಳಬೇಕಿದ್ದ ಬಸ್ ತಪ್ಪಿತೆಂದು ಮನನೊಂದ 9 ನೇ ತರಗತಿ ವಿದ್ಯಾರ್ಥಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ವರದಿಯಾಗಿದೆ.
ಆಮ್ಧೋಹ್ ಗ್ರಾಮದ ಘೋಡಾಡೋಂಗ್ರಿ ಪೋಲಿಸ್ ಪೋಸ್ಟ್ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ 14 ವರ್ಷದ ಬಾಲಕ ಖಾಸಗಿ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ರವಿ ಶಾಕ್ಯ ಮಾಹಿತಿ ನೀಡಿದ್ದಾರೆ.
ಪೋಷಕರು ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ ಬಾಲಕ ಶಾಲೆಗಳಲ್ಲಿ ತಪ್ಪದೇ ತರಗತಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗುತ್ತಿದ್ದ ಹಾಗೂ ವಿದ್ಯಾಭ್ಯಾಸದಲ್ಲಿ ಮುಂದಿದ್ದ. ಶಾಲೆಗೆ ಹೋಗುವ ಬಸ್ ತಪ್ಪಿದ್ದಕ್ಕಾಗಿ ಬಾಲಕ ತೀವ್ರವಾಗಿ ಮನನೊಂದು ಕಣ್ಣೀರು ಹಾಕುತ್ತಾ ಮನೆಗೆ ಬಂದಿದ್ದಾನೆ. ಈ ಬಳಿಕ ಮನೆಯ ಹಿಂಭಾಗದಲ್ಲಿದ್ದ ಮರವೊಂದಕ್ಕೆ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ” ಎಂದು ಪೋಷಕರು ಹೇಳಿದ್ದಾರೆ.





