ಕಾಸರಗೋಡು: ದಂಪತಿಗಳು ಸಂಚರಿಸುತ್ತಿದ್ದ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ: ಪತ್ನಿ ಮೃತ್ಯು, ಪತಿಗೆ ಗಾಯ
ಕಾಸರಗೋಡು: ದಂಪತಿಗಳು ಸಂಚರಿಸುತ್ತಿದ್ದ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಉಪ್ಪಳ ಬಳಿ ಬುಧವಾರ ನಡೆದಿದ್ದು, ಪತ್ನಿ ಮೃತಪಟ್ಟು, ಪತಿ ಗಾಯಗೊಂಡಿದ್ದಾರೆ.
ಮಂಗಳೂರು ಕೊಟ್ಟಾರ ಚೌಕಿಯ ನಳಿನಾಕ್ಷಿ (೬೫) ಮೃತಪಟ್ಟವರು. ಪತಿ ಪ್ರಭಾಕರ ಗಾಯಗೊಂಡಿದ್ದಾರೆ. ಪರಾರಿಯಾಗಿರುವ ವಾಹನದ ಪತ್ತೆಗೆ ಮಂಜೇಶ್ವರ ಠಾಣಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕಾಸರಗೋಡಿನಲ್ಲಿ ಸಂಬಂಧಿಕರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೈಕ್ ನಲ್ಲಿ ಮಂಗಳೂರು ಕಡೆಗೆ ಮರಳುತ್ತಿದ್ದಾಗ ಬೈಕ್ ಗೆ ಅತೀ ವೇಗದಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಇಬ್ಬರು ರಸ್ತೆಗೆಸೆಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ನಳಿನಾಕ್ಷಿ ರವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಡಿಕ್ಕಿ ಹೊಡೆದದ್ದು ಪಿಕಪ್ ವ್ಯಾನ್ ಆಗಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ರಸ್ತೆ ಬದಿಯ ಮನೆ, ಕಟ್ಟಡ ದಲ್ಲಿರುವ ಸಿ ಸಿ ಟಿ ವಿ ದ್ರಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.




