ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ
ರಾಮನಗರ: ಪ್ರೀತಿಸಿ ಮದುವೆಯಾದರು ಎಂಬ ಒಂದೇ ಕಾರಣಕ್ಕೆ ಬಾವನನ್ನೇ ಬಾಮೈದ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಘಟನೆ ರಾಮನಗರ ತಾಲೂಕಿನ ಕೆಜಿ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆಜಿ ಹೊಸಹಳ್ಳಿ ಗ್ರಾಮದ ಅಶ್ವತ್ಥ್ ಗೌಡ(28) ಕೊಲೆಯಾದ ದುರ್ದೈವಿ. ಕೆಜಿ ಹೊಸಳ್ಳಿ ಗ್ರಾಮದ ಅಶ್ವತ್ಥ್ ಗೌಡ ಹಾಗೂ ಚನ್ನಪಟ್ಟಣ ನಗರದ ಮಹದೇಶ್ವರ ಬಡಾವಣೆಯ ಸಹನಾ, ದೂರದ ಸಂಬಂಧಿಗಳು.
ಅಲ್ಲದೇ ಒಂದೇ ಜಾತಿಯವರಾಗಿದ್ದರು. ಹೀಗಾಗಿ ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಯ ವಿಚಾರ ಎರಡೂ ಕುಟುಂಬದವರಿಗೂ ಗೊತ್ತಿತ್ತು.
ವಿರೋಧದ ನಡುವೆ ಕಳೆದ ಎರಡು ತಿಂಗಳ ಹಿಂದೆ ಅಶ್ವತ್ಥ್ ಹಾಗೂ ಸಹನಾ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ನಂತರ ಇಬ್ಬರೂ ಕೂಡ ಕೆಜಿ ಹೊಸಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು.
ಮಂಗಳವಾರ ರಾಮನಗರದಲ್ಲಿ ಬೀಗರ ಔತಣಕೂಟಕ್ಕೆ ಹೋಗಿ ವಾಪಸ್ ಬರುವ ವೇಳೆ ಕೆಜಿ ಹೊಸಹಳ್ಳಿ ಗ್ರಾಮದಲ್ಲಿ ಅಶ್ವತ್ಥ್ ಮನೆಯಿಂದ ಕೂಗಳತೆ ದೂರದಲ್ಲಿ ಹಿಪ್ಪುನೇರಳೆ ಗಿಡಗಳ ಮಧ್ಯದಲ್ಲಿ ಹೊಂಚು ಹಾಕಿ ಕುಳಿತಿದ್ದ ಸಹನಾಳ ಸಹೋದರ ಭರತ್ ಮತ್ತು ಗ್ಯಾಂಗ್ ಏಕಾಏಕಿ ದಾಳಿ ನಡೆಸಿದೆ.
ರಾಮನಗರದಿಂದ ಬರುವುದನ್ನೇ ಕಾದು ಬೈಕ್‌ನಲ್ಲಿ ಹಿಂದಿನಿಂದ ಬಂದು ಮೊದಲಿಗೆ ಸಹನಾಳನ್ನು ತಳ್ಳಿದ್ದಾರೆ. ಇದರಿಂದಾಗಿ ಆಕೆ ಕೆಳಗೆ ಬಿದ್ದಿದ್ದಾಳೆ. ನಂತರ ಅಶ್ವತ್ಥ್ ಮೇಲೆ ದಾಳಿ ನಡೆಸಲು ಮುಂದಾಗಿದ್ದಾರೆ.




