ವಿಮಾನದ ಕಾಕ್‌ಪಿಟ್‌ನಲ್ಲಿ ಸಮೋಸಾ, ಪಾನೀಯ ಸೇವನೆ: ಇಬ್ಬರು ಪೈಲಟ್ ಗಳು ಅಮಾನತು
ನವದೆಹಲಿ: ವಿಮಾನದ ಕಾಕ್‌ಪಿಟ್‌ನಲ್ಲಿ ಸಮೋಸಾ ತಿಂದು ಪಾನೀಯ ಸೇವಿಸಿದ ಇಬ್ಬರು ಪೈಲಟ್‌ಗಳನ್ನು ಸ್ಪೈಸ್‌ಜೆಟ್ ಅಮಾನತುಗೊಳಿಸಿದೆ.
ಇಬ್ಬರು ಪೈಲಟ್‌ಗಳು ದೆಹಲಿಯಿಂದ ಗುವಹಟಿಗೆ ಹೊರಟಿದ್ದ ವಿಮಾದ ಕಾಕ್‌ಪಿಟ್‌ನಲ್ಲಿ ಕುಳಿತುಕೊಂಡು ಸಮೋಸಾ ತಿನ್ನುವುದು ಮೇಲಾಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ವಿಚಾರಣೆ ಬಾಕಿ ಇದೆ ಎಂದು ವಿಮಾನಯಾನದ ವಕ್ತಾರರು ಹೇಳಿದ್ದಾರೆ.
ಕಾಕ್‌ಪಿಟ್ ವಿಮಾನದ ಅತ್ಯಂತ ಸೂಕ್ಷ್ಮ ಹಾಗೂ ನಿರ್ಣಾಯಕ ಸ್ಥಳವಾಗಿರುವುದರಿಂದ ಇಲ್ಲಿ ಪ್ರಯಾಣಿಕರಿಗೆ ಪ್ರವೇಶವೇ ಇಲ್ಲ. ಇದರ ಜೊತೆಗೆ ಇಲ್ಲಿ ಯಾವುದೇ ದ್ರವ ಸೇರಿದಂತೆ ಆಹಾರ ತಿನಿಸುಗಳನ್ನು ಇಡುವಂತಿಲ್ಲ. ಇದು ಸುರಕ್ಷತಾ ನಿಯಮವಾಗಿದ್ದು, ವಿಮಾನದ ಪೈಲಟ್ ಸೇರಿದಂತೆ ಎಲ್ಲರಿಗೂ ಈ ಸೂಕ್ಷ್ಮತೆಯ ಅರಿವಿದೆ. ಹೀಗಿದ್ದು, ಕಾಕ್‌ಪಿಟ್‌ನಲ್ಲಿ ಸಮೋಸ ತಿಂದು ಪಾನೀಯ ಸೇವಿಸಿ ಸುರಕ್ಷತಾ ನಿಯಮವನ್ನು ಮೀರಿ ವಿಮಾನ ಪ್ರಯಾಣಿಕರ ಜೀವಕ್ಕೆ ಆತಂಕ ತಂದೊಡ್ಡುತ್ತಿದ್ದ ಹಿನ್ನೆಲೆಯಲ್ಲಿ ಸ್ಪೈಸ್ ಜೆಟ್ ಇಬ್ಬರೂ ಪೈಲಟ್‌ಗಳನ್ನು ವಿಮಾನದಿಂದ ಕೆಳಗಿಳಿಸಿದೆ.
ಇಬ್ಬರು ಪೈಲಟ್‌ಗಳನ್ನು ಸದ್ಯದ ಮಟ್ಟಿಗೆ ಕರ್ತವ್ಯದಿಂದ ತಡೆ ಹಿಡಿಯಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಪೈಸ್ ಏರ್‌ಜೆಟ್ ಸಂಸ್ಥೆಯ ವಕ್ತಾರರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕಾಕ್‌ಪಿಟ್ ಒಳಗೆ ಕುಳಿತು ಆಹಾರ ಸೇವಿಸುವುದಕ್ಕೆ ಸಂಬಂಧಿಸಿದಂತೆ ಶಿಸ್ತುಬದ್ಧವಾದ ನಿಯಮವಿದೆ. ಎಲ್ಲಾ ವಿಮಾನದ ಸಿಬ್ಬಂದಿ ಇದನ್ನು ಅನುಸರಿಸುತ್ತಾರೆ. ಈ ಬಗ್ಗೆ ಬಗ್ಗೆ ತನಿಖೆ ಪೂರ್ಣಗೊಂಡ ನಂತರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.




