February 3, 2026

ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಎಳೆದೊಯ್ದು ತಂಡದಿಂದ ಹಲ್ಲೆ:
ಆರೋಪಿಗಳನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸುವಂತೆ ಒತ್ತಾಯ

0
photo.jpg

ಮಡಿಕೇರಿ: ಇಬ್ಬರು ಮುಸ್ಲಿಮ್ ವಿದ್ಯಾರ್ಥಿಗಳನ್ನು ಸಂಘಪರಿವಾರದ ಕಾರ್ಯಕರ್ತರೆನ್ನಲಾದ ತಂಡ ಕಟ್ಟಡವೊಂದಕ್ಕೆ ಎಳೆದೊಯ್ದು ರಕ್ತಬರುವಂತೆ ಗುಂಪು ಹಲ್ಲೆ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ಶನಿವಾರಸಂತೆಯಲ್ಲಿ ಗುರುವಾರ ನಡೆದಿದೆ.

ಹಲ್ಲೆಗೊಳಗಾದ ಇಬ್ಬರು ಮುಸ್ಲಿಮ್ ವಿದ್ಯಾರ್ಥಿಗಳು ಶನಿವಾರಸಂತೆಯ ಖಾಸಗಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದು, ಸದ್ಯ ಕೊಡ್ಲಿಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರು ಮುಸ್ಲಿಮ್ ವಿದ್ಯಾರ್ಥಿನಿಯರು ಎಂದಿನಂತೆ ಗುರುವಾರ ತರಗತಿಗೆ ತೆರಳಿದ್ದರು. ಈ ವೇಳೆ ಅವರಿಬ್ಬರ ಹಿಂದೂ ಸ್ನೇಹಿತೆಯೊಬ್ಬಳು ಓರ್ವ ವಿದ್ಯಾರ್ಥಿನಿಯ ಬುರ್ಖಾವನ್ನು ಪಡೆದು ಸಂಜೆ ಹಿಂದಿರುಗಿಸುವುದಾಗಿ ತಿಳಿಸಿದ್ದಳು. ಅದರಂತೆ ಈ ಇಬ್ಬರು ಮುಸ್ಲಿಮ್ ವಿದ್ಯಾರ್ಥಿನಿಯರ ಪೈಕಿ ಓರ್ವ ವಿದ್ಯಾರ್ಥಿನಿ ಬುರ್ಖಾವನ್ನು ಹಿಂದೂ ವಿದ್ಯಾರ್ಥಿನಿಗೆ ನೀಡಿದ್ದಳು. ತರಗತಿ ಬಿಟ್ಟರು ಸಂಜೆಯಾಗುತ್ತಾ ಬಂದರೂ ಬುರ್ಖಾ ಪಡೆದುಕೊಂಡ ವಿದ್ಯಾರ್ಥಿನಿ ತಂದು ಕೊಟ್ಟಿರಲಿಲ್ಲ. ಆಗ ಮುಸ್ಲಿಮ್ ವಿದ್ಯಾರ್ಥಿಗಳು ಬಸ್ಸ್ ಗಾಗಿ ಶನಿವಾರಸಂತೆ ಬಳಿ ನಿಂತಿದ್ದಾಗ ಬುರ್ಖಾ ಪಡೆದುಕೊಂಡ ಹಿಂದೂ ವಿದ್ಯಾರ್ಥಿನಿ ಅಲ್ಲಿಗೆ ತಂದು ಕೊಟ್ಟಿದ್ದಾಳೆ. ಈ ವೇಳೆ ತಂಡಯೊಂದು ಈ ಮೂವರು ವಿದ್ಯಾರ್ಥಿಗಳನ್ನು ಸಮೀಪದ ಕಾಂಪ್ಲೆಕ್ಸ್ ಒಂದಕ್ಕೆ ಎಳೆದೊಯ್ದು ವಿಚಾರಿಸಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹಿಂದೂ ಯುವತಿಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ. ನಾಳೆಯಿಂದ ಶನಿವಾರಸಂತೆಗೆ ಬಂದರೆ ಆ್ಯಸಿಡ್ ದಾಳಿ ನಡೆಸುವುದಾಗಿ ದುಷ್ಕರ್ಮಿಗಳು ಬೆದರಿಸಿದ್ದಾರೆ.

ಅಷ್ಟರಲ್ಲಿ ವಿಷಯ ಅರಿತ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವತಿಯರನ್ನು ಅಲ್ಲಿಂದ ರಕ್ಷಿಸಿ ಸಂಬಂಧಿಕರೊಂದಿಗೆ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಮನೆಗೆ ಬಂದು ವಿದ್ಯಾರ್ಥಿಗಳು ವಿಷಯ ತಿಳಿಸಿದ್ದು, ಅವರ ಕೈಕಾಲುಗಳಲ್ಲಿ ಗೀರಿದ ಗಾಯಗಳನ್ನು ಕಂಡ ಪೋಷಕರು ತಕ್ಷಣ ಕೊಡ್ಲಿಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ನೂರಾರು ಯುವಕರು ಆಸ್ಪತ್ರೆಯ ಮುಂಭಾಗ ಜಮಾಯಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳ ಹೇಳಿಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!