ಉಪ್ಪಿನಂಗಡಿ: ಅಪ್ರಾಪ್ತ ಬಾಲಕರು ಚಲಾಯಿಸುತ್ತಿದ್ದ ಡಿಯೋ ಸ್ಕೂಟರ್ ಸ್ಕಿಡ್ ಆಗಿ ಅಪಘಾತ: ವಿದ್ಯಾರ್ಥಿ ಮೃತ್ಯು, ಸಹ ಸವಾರ ಗಂಭೀರ
ಉಪ್ಪಿನಂಗಡಿ: ಇಲ್ಲಿನ ಸರಕಾರಿ ಶಾಲೆಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದ ಡಿಯೋ ಸ್ಕೂಟರ್ ಸ್ಕಿಡ್ ಆಗಿ ಬಿದ್ದ ದುರ್ಘಟನೆ ಕಲ್ಲೇರಿ ಸಮೀಪದ ಶಿವಗಿರಿ ಎಂಬಲ್ಲಿ ಫೆಬ್ರವರಿ 1 ರಂದು ಸಂಭವಿಸಿದ್ದು, ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಓರ್ವ ವಿದ್ಯಾರ್ಥಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ತಲೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಪ್ಪೆಟ್ಟಿಯ ಅಬೂಬಕ್ಕರ್ ಸಿದ್ದೀಕ್ ಮತ್ತು ಖಲೀಲ್ ಎಂಬವರಲ್ಲಿ ಅಬೂಬಕ್ಕರ್ ಸಿದ್ದೀಕ್ ಎಂಬಾತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಫೆಬ್ರವರಿ 1 ರಂದು ಕಲ್ಲೇರಿ ಸಮೀಪದ ಶಿವಗಿರಿ ಎಂಬಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ದಿಂದ ಉಪ್ಪಿನಂಗಡಿಯಿಂದ ಕುಪ್ಪೆಟ್ಟಿ ಕಡೆಗೆ ಅತೀ ವೇಗದಿಂದ ಚಲಾಯಿಸಿಕೊಂಡು ಬಂದ ಡಿಯೋ ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಉಪ್ಪಿನಂಗಡಿಯಿಂದ ಕಲ್ಲೇರಿ ಕಡೆಗೆ ಚಲಿಸುತ್ತಿದ್ದ ಜೀತೋ ಟೆಂಪೊಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಆದರೆ ಸ್ಕೂಟರ್ ಜೀತೋ ಟೆಂಪೊಗೆ ಡಿಕ್ಕಿ ಹೊಡೆದಿರುವ ಬಗ್ಗೆ ಜೀತೋ ಟೆಂಪೋದಲ್ಲಿ ಯಾವುದೇ ಕುರುಹುಗಳು ಪತ್ತೆ ಆಗಿಲ್ಲ ಎನ್ನಲಾಗಿದೆ. ಆದರೆ ಸ್ಥಳೀಯ ಕೆಲ ಕಿಡಿಗೇಡಿಗಳು ಈ ಬಗ್ಗೆ ಅಶಾಂತಿ ಸೃಷ್ಟಿಸಿ ಗಲಭೆಗೆ ಯತ್ನ ನಡೆಸಿದ್ದರು ಈ ಸಂದರ್ಭದಲ್ಲಿ ಸಕಾಲಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದರು.
ಅಪ್ರಾಪ್ತ ಸ್ಕೂಟರ್ ಸವಾರರು ಹೆಲ್ಮೆಟ್ ಧರಿಸದ ಕಾರಣ ಸ್ಕೂಟರ್ ಸ್ಕಿಡ್ ಆಗಿ ಬಿದ್ದ ಸಂದರ್ಭದಲ್ಲಿ ಸವಾರ ಮತ್ತು ಸಹ ಸವಾರನ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಸಹ ಸವಾರ ಕುಪ್ಪೆಟ್ಟಿಯ ಅಬೂಬಕ್ಕರ್ ಸಿದ್ದೀಕ್ ಎಂಬಾತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಅಪ್ರಾಪ್ತ ಬಾಲಕರು ಚಲಾಯಿಸುತ್ತಿದ್ದ KA 53 ER 6958 ಡಿಯೋ ಸ್ಕೂಟರಿನ ನಂಬರ್ ಪ್ಲೇಟ್ ನಕಲಿಯಾಗಿದ್ದು, ಈ ಬಗ್ಗೆ ಬಂಟ್ವಾಳದ ಸಾರಿಗೆ ಅಧಿಕಾರಿಗಳು ಪೊಲೀಸರಿಗೆ ದೂರನ್ನು ನೀಡಿದ್ದು, ಅಪ್ರಾಪ್ತ ಬಾಲಕರು ಚಲಾಯಿಸುತ್ತಿದ್ದ ಡಿಯೋ ಸ್ಕೂಟರಿನ ಅಸಲಿ ಮಾಲಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಅಜಾಗರೂಕತೆ ಮತ್ತು ನಿರ್ಲಕ್ಷ್ಯತನ, ಹೆಲ್ಮೆಟ್ ಧರಿಸದೆ, ಇನ್ಸುರೆನ್ಸ್ ಇಲ್ಲದೆ,ಡ್ರೈವಿಂಗ್ ಲೈಸನ್ಸ್ ಇಲ್ಲದ ಅಪ್ರಾಪ್ತ ಮಕ್ಕಳಿಂದ ಸ್ಕೂಟರ್ ಚಲಾವಣೆ ಎಂಬ ಕಾರಣದಿಂದ ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




