ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ವಿದ್ಯಾರ್ಥಿನಿ ಆತ್ಮಹತ್ಯೆ:
ಪ್ರಾಂಶುಪಾಲೆ ಸಹಿತ ಭೌತಶಾಸ್ತ್ರ ಶಿಕ್ಷಕನ ಬಂಧನ
ತಮಿಳುನಾಡು: ಈ ವರ್ಷದ ಆರಂಭದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಇತ್ತಿಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ 12 ನೇ ತರಗತಿಯ ವಿದ್ಯಾರ್ಥಿನಿಯ ಪ್ರಕರಣಕ್ಕೆ ಸಂಬಂಧಿಸಿದಂತೆ 31 ವರ್ಷದ ಭೌತಶಾಸ್ತ್ರ ಶಿಕ್ಷಕ ಮತ್ತು ಪ್ರಾಂಶುಪಾಲೆಯನ್ನು ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ.
ಇದೇ ಶಿಕ್ಷಕ ಇನ್ನೂ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನುವಂತಹ ವಾಟ್ಸಾಪ್ ಚಾಟ್ ಹಾಗೂ ಆಡಿಯೋ ಸಂಭಾಷಣೆ ಹರಿದಾಡುತ್ತಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಈ ಪುರಾವೆಗಳು ಅದೇ ಶಿಕ್ಷಕನಿಗೆ ಸಂಬಂಧಿಸಿದ್ದೇ ಎನ್ನುವುದು ಖಚಿತವಾಗಿಲ್ಲ. ಸಾರ್ವಜನಿಕ ಆಕ್ರೋಶ ಹೆಚ್ಚಾದ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಭಾಗಿಯಾಗಿರುವ ಕುರಿತಾದ ಕೈಬರಹದ ಟಿಪ್ಪಣಿಯೊಂದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಲೈಂಗಿಕ ಕಿರುಕುಳವು ಈ ವರ್ಷದ ಮೊದಲರ್ಧದಲ್ಲಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಎನ್‌ಡಿಟಿವಿ ಉಲ್ಲೇಖಿಸಿದೆ.
ನವೆಂಬರ್ 11ರಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಲೈಂಗಿಕ ದೌರ್ಜನ್ಯದ ಬಗ್ಗೆ ವಿದ್ಯಾರ್ಥಿನಿಯ ದೂರಿನ ಮೇರೆಗೆ ಕ್ರಮಕೈಗೊಳ್ಳದ ಖಾಸಗಿ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನೂ ಪೊಲೀಸರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾನೂನಿನಡಿ ಬಂಧಿಸಿದ್ದಾರೆ.





