ಐಸಿಸಿ ಏಕದಿನ ಕ್ರಿಕೆಟ್ ಬೌಲರ್‌ಗಳ ರ್‍ಯಾಂಕಿಂಗ್: ಭಾರತದ ವೇಗಿ ಮೊಹಮ್ಮದ್ ಸಿರಾಜ್ NO. 1
ದುಬೈ: ಬುಧವಾರ ಬಿಡುಗಡೆಗೊಂಡ ಐಸಿಸಿ ಏಕದಿನ ಕ್ರಿಕೆಟ್ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ ನಂಬರ್ ಒನ್ ಸ್ಥಾನಕ್ಕೆ ಏರಿದ್ದಾರೆ.
ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್, ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ ಅವರನ್ನು ಹಿಂದಿಕ್ಕಿ ಸಿರಾಜ್ ಮೊದಲ ಬಾರಿಗೆ ಅಗ್ರ ಸ್ಥಾನಕ್ಕೆ ಏರಿದ್ದಾರೆ.
ಕಳೆದ 12 ತಿಂಗಳಿಂದ ಅತ್ಯುತ್ತಮ ಫಾರ್ಮ್‌ನಲ್ಲಿರುವ ಸಿರಾಜ್, ಈ ತಿಂಗಳ ಆರಂಭದಲ್ಲಿ ತವರಿನಲ್ಲಿ ನಡೆದ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಳಲ್ಲಿ ಒಬ್ಬ ವೇಗಿಯಾಗಿ ಎಷ್ಟರಮಟ್ಟಿಗೆ ಸುಧಾರಿಸಿದ್ದೇನೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.
ಭಾರತದ ಬೌಲಿಂಗ್ ಕೋಚ್ ಪಾರಸ್ ಮ್ಹಾಂಬ್ರೆ, ಕಳೆದ ವರ್ಷ ಸಿರಾಜ್ ಅವರಿಗೆ ಅವರ ಆಟದ ಕೆಲ ಆಯಾಮಗಳ ಸುಧಾರಣೆಗೆ ಶ್ರಮ ವಹಿಸುವಂತೆ ಸೂಚಿಸಿದ್ದರು. ಈ ಸಂಬಂಧ ಗಮನ ಕೇಂದ್ರೀಕರಿಸಿದ್ದ ಸಿರಾಜ್ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ.




