ಕೊನೆಗೂ ಕಾಂಗ್ರೆಸ್ ಸೇರ್ಪಡೆಗೊಂಡ ಅಶೋಕ್ ಕುಮಾರ್ ರೈ: ಡಿಕೆಶಿ, ಸಿದ್ಧರಾಮಯ್ಯ ನೇತೃತ್ವದಲ್ಲಿ ಸೇರ್ಪಡೆ: ಧ್ವಜ ನೀಡಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ
ಪುತ್ತೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಅಪರಾಹ್ನ ಮಂಗಳೂರು ಲಾಲ್ ಬಾಗ್ ನಲ್ಲಿರುವ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯ ಸದಸ್ಯರಾಗಿದ್ದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಕಾಂಗ್ರೆಸ್ ಸೇರ್ಪಡೆಯಾದರು. ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಗೂ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ರವರು ಪಕ್ಷದ ಧ್ವಜ ನೀಡುವ ಮೂಲಕ ಅಶೋಕ್ ರೈ ರವರನ್ನು ಕಾಂಗ್ರೆಸ್ ಸ್ವಾಗತಿಸಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರು ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ರವರನ್ನು ಕರೆದು ಅವರ ಕೈಯಿಂದ ಅಶೋಕ್ ಕುಮಾರ್ ರೈ ಯವರಿಗೆ ಪಕ್ಷದ ಧ್ವಜ ನೀಡಿಸಿದರು.
ಈ ಮೊದಲು ಕಾರ್ಯಕ್ರಮವೊಂದರಲ್ಲಿ ನೀವು ಆಶೀರ್ವಾದ ಮಾಡಿದರೆ ಮಾತ್ರ ನಾನು ರಾಜಕೀಯಕ್ಕೆ ಬರುವುದಾಗಿ ಅಶೋಕ್ ಕುಮಾರ್ ರೈ ಯವರು ತಿಳಿಸಿದ್ದು, ಅದೇ ರೀತಿ ಇಂದು ಶಕುಂತಲಾ ಶೆಟ್ಟಿ ಅವರ ಸಮ್ಮುಖದಲ್ಲೇ, ಗಣ್ಯರ ಸಮಾಗಮದಲ್ಲಿ ಅವರ ಕೈಯಿಂದಲೇ ಧ್ವಜ ಸ್ವೀಕರಿಸುವ ಮೂಲಕ ರಾಜಕೀಯದ ಹೊಸ ಇನ್ನಿಂಗ್ಸ್ ಪ್ರಾರಂಭಿಸಿದರು.
ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ವೇದಿಕೆಯಿಂದ ಕೆಳಗೆ ಇಳಿದಿದ್ದ ಅಶೋಕ್ ರೈಯವರನ್ನು ಮತ್ತೆ ವೇದಿಕೆಗೆ ಕರೆದು ಆಸನದಲ್ಲಿ ಕುಳಿತುಕೊಳ್ಳಲು ಡಿ.ಕೆ.ಶಿವಕುಮಾರ್ ಹೇಳಿದರು. ಬಳಿಕ ಅಶೋಕ್ ರೈ ಅವರು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಮತ್ತು ಮುಖಂಡ ಮಧು ಬಂಗಾರಪ್ಪ ಅವರ ಪಕ್ಕ ಆಸೀನರಾದರು..





