ಪುತ್ತೂರು: ಯುವತಿಗೆ ಚಾಕುವಿನಿಂದ ಇರಿದು ಹತ್ಯೆಗೈದ ಪ್ರಕರಣ: ಯುವಕನ ವಿರುದ್ಧ ದೂರು ದಾಖಲು
ಪುತ್ತೂರು: ವ್ಯಕ್ತಿಯೋರ್ವ ಯುವತಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಾಯಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಮುಂಡೂರು ಕಂಪ ನಿವಾಸಿ ದಿ.ಗುರುವ ರವರ ಪತ್ನಿ ಗಿರಿಜಾ (43) ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಜ.17 ರಂದು ಬೆಳಿಗ್ಗೆ ಗಿರಿಜಾ ರವರು ತನ್ನ ತೋಟಕ್ಕೆ ಹೋಗಿದ್ದಾಗ ಅವರ ಮಗಳಾದ ಜಯಶ್ರೀಯು ಮನೆಯಲ್ಲಿ ಇದ್ದಳು 11.30 ಗಂಟೆಯ ವೇಳೆಗೆ ಅಮ್ಮಾ ಎಂದು ಕೂಗಿಕೊಂಡು ಗಿರಿಜಾ ರವರ ಬಳಿಗೆ ಓಡಿ ಬಂದಿರುತ್ತಾಳೆ. ಆಗ ಅವಳ ಹೊಟ್ಟೆಯಲ್ಲಿ ಗಾಯವಾಗಿ ರಕ್ತ ಸ್ರಾವವಾಗುತ್ತಿರುವುದು ಕಂಡು ಬಂದಿದ್ದು, ಗಿರಿಜಾ ರವರು ಆಟೋ ರಿಕ್ಷಾದಲ್ಲಿ ಜಯಶ್ರೀಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಪರೀಕ್ಷಿಸಿ, ಜಯಶ್ರೀಯು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಜಯಶ್ರೀಯನ್ನು ಕನಕಮಜಲಿನ ಉಮೇಶ ಎಂಬವನು ಕೆಲವು ಸಮಯದಿಂದ ಪ್ರೀತಿಸುತ್ತಿದ್ದು, ಆತನು ಆಗ್ಗಾಗ್ಗೆ ಗಿರಿಜಾ ರವರ ಮನೆಗೂ ಬರುತ್ತಿದ್ದನು. ಆದರೇ ಇತ್ತೀಚೆಗೆ ಅವನ ಗುಣ ನಡತೆ ಜಯಶ್ರೀಗೆ ಇಷ್ಟವಾಗದ ಕಾರಣ 2022ರ ನವೆಂಬರ್ ವೇಳೆಗೆ ಜಯಶ್ರೀಯು ಉಮೇಶನನ್ನು ದೂರ ಮಾಡಿರುತ್ತಾಳೆ. ಈ ವಿಷಯದಲ್ಲಿ ಸದ್ರಿ ಉಮೇಶನು ಅಸಮಾಧಾನದಿಂದ ಇರುತ್ತಾನೆ.
ಜಯಶ್ರೀಯು ಜ.17 ರಂದು ಮನೆಯಲ್ಲಿದ್ದಾಗ ಯಾರೋ ಅಪರಿಚಿತರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮನೆಯೊಳಗಿದ್ದ ಜಯಶ್ರೀಯನ್ನು ಯಾವುದೋ ಆಯುಧದಿಂದ ತಿವಿದು ಕೊಲೆ ಮಾಡಿದ್ದು, ಈ ಕೃತ್ಯವನ್ನು ಸದ್ರಿ ಉಮೇಶನೇ ಮಾಡಿರುವ ಸಾಧ್ಯತೆ ಇರುವುದಾಗಿ ಸಂಶಯವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ. 07/2023 ಕಲಂ:- 448 302 ಭಾ.ದಂ.ಸಂ.ನಂತೆ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ.




