ಮಡಿಕೇರಿ: ನೆಲಕ್ಕೆ ಅಪ್ಪಳಿಸಿದ ಪ್ಯಾರಾಗ್ಲೈಡರ್ ವಿಮಾನ: ತಪ್ಪಿದ ಭಾರೀ ದುರಂತ
ಕೊಡಗು: ಕಿರು ವಿಮಾನವೊಂದು ನೆಲಕ್ಕೆ ಅಪ್ಪಳಿಸಿದ್ದು, ಭಾರೀ ದುರಂತವೊಂದು ತಪ್ಪಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಿಟ್ಟೂರಿನಲ್ಲಿ ಪೈಲಟ್ ನ ನಿಯಂತ್ರಣ ತಪ್ಪಿ ಕಿರು ವಿಮಾನವೊಂದು ರಸ್ತೆಗೆ ಅಪ್ಪಳಿಸಿದೆ.
ಇಲ್ಲಿನ ನಿವಾಸಿ ಎಂ.ಮುತ್ತಣ್ಣ ಎಂಬುವವರು ತಮಗೆ ಸೇರಿದ ಸ್ವಂತ ಪ್ಯಾರಗ್ಲೈಡರ್ ನಲ್ಲಿ ಎಂದಿನಂತೆ ಶನಿವಾರ ಸಂಜೆ 4 ಗಂಟೆ 45 ನಿಮಿಷ ಸಮಯದಲ್ಲಿ ಪ್ಯಾರಾ ಗ್ಲೈಡಿಂಗ್ ಹಾರಾಟ ನಡೆಸುತ್ತಿದ್ದ ಸಂದರ್ಭ ಅದರ ಇಂಜಿನ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ನಿಯಂತ್ರಣ ಕಳೆದುಕೊಂಡು ನೇರವಾಗಿ ಬಾನಿನಿಂದ ಕೆಳಗೆ ಇಳಿದ ಗ್ಲೈಡರ್, ನಿಟ್ಟೂರು ಲಕ್ಷ್ಮಣ ತೀರ್ಥ ನದಿಯ ಸೇತುವೆ ಪಕ್ಕದ ಕಾಂಕ್ರೀಟ್ ರಸ್ತೆಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ.
ತುರ್ತು ಭೂ ಸ್ಪರ್ಶದ ಪರಿಣಾಮ ಪ್ಯಾರಾ ಗ್ಲೈಡರ್ ನ ಮುಂಭಾಗ ಮುರಿಯಲ್ಪಟ್ಟಿದ್ದು, ಚಕ್ರ ಸಹಿತ ಕೆಲವು ಭಾಗಗಳಿಗೆ ಹಾನಿಯಾಗಿದೆ. ಗ್ಲೈಡರ್‍ನ ಪೈಲಟ್ ಹಾಗೂ ಹಿಂಬದಿ ಸವಾರ ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಮುತ್ತಣ್ಣ ಎಂಬುವವರಿಗೆ ಸೇರಿದ 2 ಸೀಟರ್ ಗ್ಲೈಡರ್ ಅಪಘಾತಕ್ಕೀಡಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.




