ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲಿಂಗ್ ಮಾಡಿದ ಉಮ್ರಾನ್ ಮಲಿಕ್
ಗುವಾಹಟಿ: ಮಂಗಳವಾರ, ಜನವರಿ 10ರಂದು ಅಸ್ಸಾಂನ ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 67 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿತು.
ಇದೇ ವೇಳೆ ಭಾರತದ ಸೂಪರ್‌ಫಾಸ್ಟ್ ಬೌಲರ್ ಉಮ್ರಾನ್ ಮಲಿಕ್ ಶ್ರೀಲಂಕಾ ವಿರುದ್ಧ ಗಂಟೆಗೆ 156 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ತನ್ನದೇ ದಾಖಲೆಯನ್ನು ಅಳಿಸಿ ಹಾಕಿದರು. ಅಷ್ಟೇ ಅಲ್ಲದೇ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲಿಂಗ್ ಮಾಡಿದ ಹೆಗ್ಗಳಿಕೆಗೆ ಉಮ್ರಾನ್ ಮಲಿಕ್ ಪಾತ್ರರಾದರು.
ಭಾರತದ ಬೌಲಿಂಗ್ ಇನಿಂಗ್ಸ್‌ನ 14ನೇ ಓವರ್‌ನಲ್ಲಿ ಮತ್ತೊಬ್ಬ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ ಅವರ ವೇಗದ ಬೌಲಿಂಗ್ ದಾಖಲೆಯನ್ನು ಹಿಂದಿಕ್ಕುವ ಜೊತೆಗೆ ಉಮ್ರಾನ್ ಮಲಿಕ್ ತಮ್ಮದೇ ವೈಯಕ್ತಿಕ ದಾಖಲೆಯನ್ನು ಮುರಿದರು.
ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬಲಗೈ ವೇಗಿ ಉಮ್ರನ್ ಮಲಿಕ್ ಗಂಟೆಗೆ 155 ಕಿ.ಮೀ ಬೌಲಿಂಗ್ ಮಾಡುವ ಮೂಲಕ ಜಸ್ಪ್ರೀತ್ ಬುಮ್ರಾ ದಾಖಲೆಯನ್ನು ಮುರಿದಿದ್ದರು. ಬುಮ್ರಾ ಅವರ 153.36 ಕಿಮೀ ವೇಗದ ದಾಖಲೆಯನ್ನು ಹಿಂದಿಕ್ಕಿ ಉಮ್ರಾನ್ ಮಲಿಕ್ ಭಾರತದ ವೇಗದ ಬೌಲರ್ ಎನಿಸಿಕೊಂಡಿದ್ದರು.
ಇನ್ನು ಮೊಹಮ್ಮದ್ ಶಮಿ ಅತಿ ವೇಗದ ಬೌಲಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದು, ಅವರು ಗಂಟೆಗೆ 153.3 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ನವದೀಪ್ ಸೈನಿ ಗಂಟೆಗೆ 152.85 ಕಿಮೀ ವೇಗದಲ್ಲಿ ಬಾಲ್ ಎಸೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಉಮ್ರಾನ್ ಮಲಿಕ್ ಈಗಾಗಲೇ ಗಂಟೆಗೆ 155 ಕಿಮೀಗಿಂತ ಹೆಚ್ಚಿನ ವೇಗದ ಬೌಲಿಂಗ್ ಮಾಡಿದ್ದಾರೆ. 2022ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವಾಗ ಅವರು ಗಂಟೆಗೆ 156.9 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು.