ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಆರೆಸ್ಸೆಸ್ ಹುಟ್ಟಿರಲಿಲ್ಲ, ಹೀಗಾಗಿ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ:
ಬಿ.ಎಲ್. ಸಂತೋಷ್ ಹೇಳಿಕೆ ವೈರಲ್
ಮಂಗಳೂರು: ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಆರ್‌ಎಸ್‌ಎಸ್ ಹುಟ್ಟಿರಲಿಲ್ಲ. ಹೀಗಾಗಿ ನಾವು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿರುವ ವಿಡಿಯೊ ವೈರಲ್ ಆಗಿದೆ.
ಮಂಗಳೂರಿನ ರಾಜ್ಯ ಪ್ರಕೋಷ್ಠಗಳ ಚಿಂತನಾ ವರ್ಗದಲ್ಲಿ ಮಾತನಾಡಿರುವ ಅವರ ಸರಣಿ ವಿಡಿಯೊಗಳನ್ನು ಬಿಜೆಪಿಯ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗುತ್ತಿದ್ದು, “ನಮ್ಮ ರಾಜ್ಯದ ಅನೇಕ ರಾಜಕಾರಣಿಗಳು, ನಮ್ಮ ರಾಜ್ಯದ ಸಿದ್ದರಾಮಯ್ಯನವರು, ಸ್ವಾತಂತ್ರ್ಯಕ್ಕಾಗಿ ಏನ್ ಬಲಿದಾನ ಮಾಡಿದ್ದಾರಾ ಎಂದು ಕೇಳುತ್ತಿದ್ದಾರೆ. ಆದರೆ ನಾವು ಹುಟ್ಟಿರಲಿಲ್ಲ. ಹುಟ್ಟಿದ್ದರೆ ನಾವು ಬಲಿದಾನ ಮಾಡುತ್ತಿದ್ದೆವು. ನಾವು ಆ ಸಂದರ್ಭದಲ್ಲಿ ಹುಟ್ಟಿರಲಿಲ್ಲ ಎಂಬುದು ಭಗವಂತನ ನಿಯಮ” ಎಂದು ಹೇಳಿದ್ದಾರೆ.
“ಹುಟ್ಟಿದ್ದವರ ಹೆಸರಲ್ಲಿ ಕಾಂಗ್ರೆಸ್‌ನಲ್ಲಿ ಎಷ್ಟು ಮಂದಿ ಅಂಗಡಿ ಇಟ್ಟುಕೊಂಡಿದ್ದಾರೆಂಬುದು ಇಲ್ಲಿರುವವರಿಗೆ ಚೆನ್ನಾಗಿ ಗೊತ್ತು. ಗಾಂಧೀಜಿ ಹೆಸರಲ್ಲಿ ಊರೂರಲ್ಲಿ ಅಂಗಡಿ ಇಟ್ಟುಕೊಂಡಿದ್ದಾರೆ. ಗಾಂಧೀಜಿಗೆ ಹೆಸರಲ್ಲಿ ಪಾಪವನ್ನು ಯಾರಾದರೂ ಮಾಡಿದ್ದರೆ ಅದು ಕಾಂಗ್ರೆಸ್‌ನವರೇ. ಇದು ಸಿದ್ದರಾಮಯ್ಯನವರಿಗೆ ಯಾವತ್ತೂ ಅರ್ಥವಾಗುವುದಿಲ್ಲ. ನಾವು ಹುಟ್ಟಿರಲಿಲ್ಲ. ಹಾಗಾಗಿ ಬಲಿದಾನ ಮಾಡಲಿಲ್ಲ. ಬಲಿದಾನ ಮಾಡುವ ವಿಚಾರ ಬಂದಾಗ, ನಮ್ಮಷ್ಟು ಬಲಿದಾನ ಇನ್ನಾರೂ ಮಾಡಲಿಲ್ಲ” ಎಂದಿದ್ದಾರೆ.





