December 19, 2025

ಅಮರಾವತಿ ಹಿಂಸಾಚಾರ ಪ್ರಕರಣ:
ಮಹಾರಾಷ್ಟ್ರದ ಮಾಜಿ ಸಚಿವ ಡಾ.ಅನಿಲ್ ಬೋಂಡೆ ಬಂಧನ

0
violence-1636877193.jpg

ಮುಂಬೈ: ವಾರಾಂತ್ಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಮರಾವತಿ ಪೊಲೀಸರು ಸೋಮವಾರ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಡಾ.ಅನಿಲ್ ಬೋಂಡೆ ಮತ್ತು ಇತರ ಕೆಲವು ಪಕ್ಷದ ಸದಸ್ಯರನ್ನು ಬಂಧಿಸಿದ್ದಾರೆ.

ಅಮರಾವತಿಯಿಂದ ನಾಪತ್ತೆಯಾಗಿರುವ ಮತ್ತೊಬ್ಬ ಬಿಜೆಪಿ ಮುಖಂಡ ಪ್ರವೀಣ್ ಪೋಟೆ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಮರಾವತಿಯ ಕೊತ್ವಾಲಿ ಪ್ರದೇಶದಲ್ಲಿ ಶನಿವಾರ ಬಿಜೆಪಿ ಬಂದ್‌ಗೆ ಕರೆ ನೀಡಿದಾಗ ನಡೆದ ಗಲಭೆಗೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಸುಮಾರು 6,000 ಪಕ್ಷದ ಸದಸ್ಯರು ಮತ್ತು ಬಜರಂಗದಳದಂತಹ ಮಿತ್ರ ಸಂಘಟನೆಗಳು ಶನಿವಾರದಂದು ಬಂದ್‌ ಅನ್ನು ಕಾರ್ಯಗತಗೊಳಿಸಲು ಬೀದಿಗಿಳಿದಿದ್ದವು. ಇದು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಲು ಕಾರಣವಾಯಿತು.

ತ್ರಿಪುರಾದಲ್ಲಿ ಅಲ್ಪಸಂಖ್ಯಾತರ ವಿರೋಧಿ ಹಿಂಸಾಚಾರವನ್ನು ಪ್ರತಿಭಟಿಸಿ ಅಮರಾವತಿಯಲ್ಲಿ ಒಂದು ದಿನ ಮೊದಲು ಮುಸ್ಲಿಂ ಗುಂಪುಗಳು ನಡೆಸಿದ ಮೆರವಣಿಗೆಗೆ ಖಂಡನೆಯಾಗಿ ಬಂದ್‌ಗೆ ಕರೆ ನೀಡಲಾಗಿತ್ತು. ಈ ಪ್ರತಿಭಟನೆಯ ವೇಳೆ ಪೋಟೆ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದ್ದು, ಈ ಘಟನೆಯಲ್ಲಿ ಕಿಟಕಿಯೊಂದು ಒಡೆದು ಓರ್ವ ವ್ಯಕ್ತಿಗೆ ಗಾಯಗಳಾಗಿವೆ. ಶನಿವಾರ ಬಂದ್‌ಗೆ ಕರೆ ನೀಡಿದ ಪ್ರಮುಖರಲ್ಲಿ ಬೊಂಡೆ ಮತ್ತು ಪೋಟೆ ಪ್ರಮುಖರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶುಕ್ರವಾರ ಮತ್ತು ಶನಿವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಮರಾವತಿಯ ನಾಲ್ಕು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 26 ಎಫ್‌ಐಆರ್‌ಗಳಲ್ಲಿ ಇದುವರೆಗೆ ಒಟ್ಟು 72 ಮಂದಿಯನ್ನು ಬಂಧಿಸಲಾಗಿದೆ.
ಹಿಂಸಾಚಾರದ ನಂತರ ಕರ್ಫ್ಯೂ ವಿಧಿಸಲಾಯಿತು ಮತ್ತು ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಯಿತು. ಮಹಾರಾಷ್ಟ್ರ ಪೊಲೀಸ್‌ನ ಹಿರಿಯ ಅಧಿಕಾರಿಗಳು ಪ್ರಸ್ತುತ ಅಮರಾವತಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!