ತೆಲುಗು ನಟಿಗೆ ಹಲ್ಲೆ:
ಮೊಬೈಲ್ ಕಸಿದು ಪರಾರಿಯಾದ ಅಪರಿಚಿತರು
ಹೈದರಾಬಾದ್: ಅಪರಿಚಿತ ವ್ಯಕ್ತಿ ನಡೆಸಿದ ದಾಳಿಯಿಂದಾಗಿ ತೆಲುಗು ನಟಿ ಶಾಲೂ ಚೌರಾಸಿಯಾ ಗಾಯಗೊಂಡಿದ್ದಾರೆ.
ನವೆಂಬರ್ 14 ರಂದು ಭಾನುವಾರ ರಾತ್ರಿ ಬಂಜಾರಾ ಹಿಲ್ಸ್ ನಲ್ಲಿರುವ ಕೆಬಿಆರ್ ಪಾರ್ಕ್ ನಲ್ಲಿ ಘಟನೆ ನಡೆದಿದೆ. ರಾತ್ರಿ ಸುಮಾರು 8.30ರ ವೇಳೆ ಓಡಾಡುತ್ತಿದ್ದ ವೇಳೆ ಆಕೆಯ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡಿದ್ದಾರೆ.
ವ್ಯಕ್ತಿಯೊಬ್ಬ ಬಂದು ತನ್ನ ಬಳಿಯಿದ್ದ ಬೆಲೆಬಾಳುವ ವಸ್ತು ನೀಡುವಂತೆ ಕೇಳಿದ್ದಾನೆ, ಆದರೆ ನೀಡಲು ಆಕೆ ನಿರಾಕರಿಸಿದಾಗ ಆಕೆಯ ಮುಖಕ್ಕೆ ಕೈಯಿಂದ ಗುದ್ದಿದ್ದಾನೆ ಜೊತೆಗೆ ಕಲ್ಲು ಎಸೆದು ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ನಟಿ ಶಾಲೂ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮುಖ ಮತ್ತು ಕತ್ತಿಗೆ ಗಾಯಗಳಾಗಿದ್ದು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಟಿಯ ದೂರಿನ ಮೇರೆಗೆ ಬಂಜಾರ ಹಿಲ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.





