ವಿಟ್ಲ ಗ್ರಾಮೀಣ ಭಾಗದ ಜನಪ್ರತಿನಿಧಿಗಳ ಬಗ್ಗೆ ಶಾಸಕರಿಂದ ಹಸ್ತಕ್ಷೇಪ:
ಸುಭಾಶ್ಚಂದ್ರ ಶೆಟ್ಟಿ ಆರೋಪ
ವಿಟ್ಲ: ಸರ್ಕಾರ ಆದೇಶಗಳನ್ನು ಮಾತ್ರ ಹೊರಡಿಸುತ್ತಿದೆ ಹೊರತು ಅನುದಾನಗಳನ್ನು ನೀಡುತ್ತಿಲ್ಲ. ಗ್ರಾಮೀಣ ಭಾಗದ ಜನಪ್ರತಿನಿಧಿಗಳ ಕೆಲಸ ಕಾರ್ಯದಲ್ಲಿ ಶಾಸಕರುಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ನೌಕರರು ವಿವಿಧ ಬೇಡೀಕೆಗಳನ್ನಿಟ್ಟು ಡಿ.19ರಿಂದ ರಾಜ್ಯ ಮಟ್ಟದ ಬೃಹತ್ ಹೋರಾಟಕ್ಕೆ ನಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ ಎಂದು ರಾಜೀವಗಾಂಧಿ ಪಂಚಾಯಿತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಹೇಳಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನವನ್ನು ನೀಡಬೇಕು. ಗ್ರಾಮ ಪಂಚಾಯಿತಿಯ ಎಲ್ಲಾ ಕ್ಲರ್ಕ್, ಡಿಇಓ, ಬಿಲ್ ಕಲೆಕ್ಟರ್ ಹಾಗೂ ಡಾಟ ಎಂಟ್ರೀ ಆಪರೇಟರ್ ಗಳನ್ನು ಸಿ ದರ್ಜೆ ಸ್ಥಾನಮಾನ, ಅಟೆಂಡರ್, ಕ್ಲೀನರ್ಸ್, ವಾಟರ್ ಮ್ಯಾನ್, ಪಂಪ್ ಚಾಲಕರನ್ನು ಡಿ ದರ್ಜೆ ಸ್ಥಾನಮಾನ ನೀಡುವ ಜತೆಗೆ ನಗರ ಮತ್ತು ಪಟ್ಟಣ ಪಂಚಾಯಿತಿಯ ಸೇವಾ ನಿಯಮಾವಳಿ ನಿಗದಿಪಡಿಸಬೇಕು. ಆರೋಗ್ಯ ಭದ್ರತೆಯೊಂದಿಗೆ ನಿವೃತ್ತಿ ಜೀವನಕ್ಕೆ ಭವಿಷ್ಯ ನಿಧಿ, ಪಿಂಚಣಿಯ ವ್ಯವಸ್ಥೆ ಕಲ್ಪಿಸಬೇಕು. 2020 ಸೆಪ್ಟೆಂಬರ್ 29ರ ಮೊದಲು ಕಾರ್ಯ ನಿರ್ವಹಿಸುವ ನೌಕರರಿಗೆ ವಿದ್ಯಾರ್ಹತೆ, ವಯೋಮಾನ ಪರಿಗಣಿಸದೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ನೀಡಬೇಕು ಎಂಬ ಬೇಡಿಕೆಯನ್ನು ಸರ್ಕಾರ ಪೂರೈಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ. ಎಸ್. ಮಹಮ್ಮದ್ ಮಾತನಾಡಿ ಚುನಾವಣೆ ವಿಳಂಬ ವಿಚಾರದಲ್ಲಿ ಸರ್ಕಾರಕ್ಕೆ 5 ಲಕ್ಷ ದಂಡ ವಿಧಿಸಿದ್ದರಿಂದ ಸರ್ಕಾರ ನೈತಿಕತೆಯನ್ನು ಕಳೆದುಕೊಂಡಿದೆ. ನಮ್ಮ ತೆರಿಗೆ ಹಣದಲ್ಲಿ ನ್ಯಾಯಾಲಯ ವಿಧಿಸಿದ ದಂಡವನ್ನು ಪಾವತಿ ಮಾಡಬಾರದು. ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದ ಬಳಿಕ ಇಷ್ಟು ದುರ್ಬಲ ಮುಖ್ಯಮಂತ್ರಿಯನ್ನು ರಾಜ್ಯ ಕಂಡಿಲ್ಲ ಎಂದರು.
ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸಂದೇಶ್ ಶೆಟ್ಟಿ, ಪಟ್ಟಣ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ಕಾಂಗ್ರೆಸ್ ವಿಟ್ಲ ನಗರ ವಕ್ತಾರ ವಿ. ಕೆ. ಎಂ. ಅಶ್ರಫ್ ಉಪಸ್ಥಿತರಿದ್ದರು.