ತ್ರಿಪುರಾ ಕೋಮು ಹಿಂಸಾಚಾರದ ಕುರಿತು ರಿಪೋರ್ಟ್ ಮಾಡಲು ತೆರಳಿದ್ದ ಇಬ್ಬರು ಪತ್ರಕರ್ತೆಯರ ಬಂಧನ
ತ್ರಿಪುರಾ: ರಾಜ್ಯದಲ್ಲಿ ನಡೆದ ಕೋಮು ಹಿಂಸಾಚಾರದ ಕುರಿತು ಗ್ರೌಂಡ್ ರಿಪೋರ್ಟ್ ಮಾಡಲು ತೆರಳಿದ್ದ ಸುದ್ದಿ ವೆಬ್‌ಸೈಟ್ ಎಚ್‌ಡಬ್ಲೂ ನ್ಯೂಸ್‌ನ ಇಬ್ಬರು ಪತ್ರಕರ್ತೆಯರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಪತ್ರಕರ್ತೆಯರ ವಿರುದ್ಧ ವಿಶ್ವ ಹಿಂದೂ ಪರಿಷತ್ತಿನ ದೂರಿನ ಮೇಲೆ ಶನಿವಾರ ಉನಕೋಟಿ ಜಿಲ್ಲೆಯ ಫಾಟಿಕ್ರೋಯ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಸಿಲ್ಚಾರ್‌ಗೆ ತೆರಳುತ್ತಿದ್ದ ವೇಳೆ ಅಸ್ಸಾಂ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಅಸ್ಸಾಂನಲ್ಲಿ ಇವರ ಮೇಲೆ ಯಾವುದೇ ದೂರು ದಾಖಲಾಗದಿದ್ದರೂ ಗೋಮತಿ ಜಿಲ್ಲಾ ಎಸ್‌ಪಿ ಆದೇಶದಂತೆ ಬಂಧಿಸಲಾಗಿದೆ.
ದೆಹಲಿ ಮೂಲದ ವರದಿಗಾರರಾದ 21 ವರ್ಷದ ಸಮೃದ್ಧಿ ಸಕುನಿಯಾ ಮತ್ತು 25 ವರ್ಷದ ಸ್ವರ್ಣ ಝಾ ವಿರುದ್ಧ ಭಾರತೀಯ ದಂಡ ಸಂಹಿತೆಯ 120B (ಕ್ರಿಮಿನಲ್ ಪಿತೂರಿ), 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಮತ್ತು 504 ಸೆಕ್ಷನ್ ಅಡಿಗಳಲ್ಲಿ ಫಾಟಿಕ್ರೋಯ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
“ನಮ್ಮನ್ನು ಅಸ್ಸಾಂನ ಕರೀಂಗಂಜ್‌ನ ನಿಲಂಬಜಾರ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ. ಗೋಮತಿ ಜಿಲ್ಲಾ ಎಸ್‌ಪಿಯವರು ನಮ್ಮ ಬಂಧನಕ್ಕೆ ಆದೇಶ ನೀಡಿದ್ದಾರೆ ಎಂದು ನಿಲಂಬಜಾರ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿಯಿಂದ ನಮಗೆ ತಿಳಿಯಿತು” ಎಂದು ಪತ್ರಕರ್ತೆ ಸಮೃದ್ಧಿ ಸಕುನಿಯಾ ಟ್ವೀಟ್ ಮಾಡಿದ್ದಾರೆ. ಜೊತೆಗೆ ತಮ್ಮ ಸುದ್ದಿ ಸಂಸ್ಥೆಯ ಅಧಿಕೃತ ಹೇಳಿಕೆಯನ್ನು ಲಗತ್ತಿಸಿದ್ದಾರೆ.





