ಉತ್ತರ ಪ್ರದೇಶ: ಹಸುಗಳ ತುರ್ತು ಸೇವೆಗಾಗಿ 515 ಆ್ಯಂಬುಲೆನ್ಸ್
ಲಖನೌ: ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಹಸುಗಳಿಗಾಗಿ ಆಂಬುಲೆನ್ಸ್ ಸೇವೆ ಆರಂಭಿಸಲು ಉತ್ತರ ಪ್ರದೇಶ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಭಾನುವಾರ ಹೇಳಿದ್ದಾರೆ.
ಮಥುರಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಚೌಧರಿ, ಈ ಬೃಹತ್ ಯೋಜನೆಗಾಗಿ 515 ಆಂಬುಲೆನ್ಸ್‌ಗಳು ಸಜ್ಜಾಗಿವೆ. ಬಹುಶಃ ದೇಶದಲ್ಲೇ ಇದು ಮೊದಲು ಎಂದು ತಿಳಿಸಿದ್ದಾರೆ.
ಸೇವೆಗಾಗಿ ‘112’ ತುರ್ತು ಸಂಖ್ಯೆಯಾಗಿದ್ದು, ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿರುವ ಹಸುಗಳಿಗೆ ಯೋಜನೆಯಿಂದ ತ್ವರಿತವಾಗಿ ಚಿಕಿತ್ಸೆ ಸಿಗಲಿದೆ.
ತುರ್ತು ಸೇವೆಗಾಗಿ ಕರೆ ಬಂದ 15–20 ನಿಮಿಷದೊಳಗೆ ಪಶುವೈದ್ಯ ಮತ್ತು ಇಬ್ಬರು ಸಹಾಯಕರೊಂದಿಗೆ ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಲಿದೆ. ಯೋಜನೆಯು ಡಿಸೆಂಬರ್‌ನಿಂದ ಆರಂಭವಾಗಲಿದ್ದು, ಅದರಂತೆ ಮನವಿ ಸ್ವೀಕಾರಕ್ಕಾಗಿ ಲಖನೌನಲ್ಲಿ ಕಾಲ್‌ಸೆಂಟರ್ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.





