ಮಾಣಿ: ಮಹಿಳಾ ಸಬಲೀಕರಣ ಮತ್ತು ದೂರದೃಷ್ಟಿ ಯೋಜನೆಯ ವಿಶೇಷ ಗ್ರಾಮ ಸಭೆ
ಮಾಣಿ: ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಎಸ್.ಎಮ್.ಕೃಷ್ಣ ಸರ್ಕಾರ ಅಂದು ಅನುಷ್ಠಾನಕ್ಕೆ ತಂದ ಸ್ತ್ರೀಶಕ್ತಿ ಸಂಘಟನೆಯ ಕಾರ್ಯಕ್ರಮಗಳಿಂದ ಸಾಧ್ಯವಾಯಿತು ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.
ಮಹಿಳಾ ಸಬಲೀಕರಣ ಮತ್ತು ದೂರದೃಷ್ಟಿ ಯೋಜನೆಯ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೆರಿಗೆ, ಶುಲ್ಕಗಳನ್ನು ಸಮರ್ಪಕವಾಗಿ ಸಂಗ್ರಹ ಮಾಡುವ ಮೂಲಕ ಪಂಚಾಯತ್ ಆದಾಯವನ್ನು ಸದೃಢಗೊಳಿಸುವ ನಿರ್ಧಾರವನ್ನು ತೆಗೆದುಕೊಂಡು ಅದರ ಜೊತೆಗೆ ಸರ್ಕಾರದಿಂದ ಬರುವ ಅನುದಾನಗಳಿಗೆ ಮುಂದಿನ ಐದು ವರ್ಷದ ಅವಧಿಗೆ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ಮಾನಸಿಕ, ದೈಹಿಕ, ಲೈಂಗಿಕ ದೌರ್ಜನ್ಯದಿಂದ ಸಮಾಜ ಮುಕ್ತಿ ಹೊಂದಬೇಕಾದರೆ ಮಹಿಳೆಯರು ಎಚ್ಚೆತ್ತುಕೊಳ್ಳಬೇಕು. ಸಂಪ್ರದಾಯ, ಸಂಸ್ಕಾರ, ಮನೆಕೆಲಸಗಳನ್ನು ಮಕ್ಕಳಿಗೆ ಹೇಳಿಕೊಡುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ಪರಿವರ್ತಿಸಬೇಕು ಎಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಂತ್ವನ ಕೇಂದ್ರದ ಸಂಯೋಜಕಿ ವಿದ್ಯಾ ಹೇಳಿದರು.
ದೂರದೃಷ್ಟಿ ಯೋಜನೆಯ ಮಾಹಿತಿ ನೀಡಿದ ಸಂಪನ್ಮೂಲ ವ್ಯಕ್ತಿ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಯೋಜನಾ ಸಮಿತಿಯ ಮೂಲಕ ಗ್ರಾಮದ ಅಭಿವೃದ್ಧಿಗಾಗಿ ಸುದೀರ್ಘವಾದ ಅವಧಿಗೆ ಯೋಜನೆಯನ್ನು ರೂಪಿಸುವುದು ಅನಿವಾರ್ಯ. ವಾಸ್ತವ ಮಾಹಿತಿಯೊಂದಿಗೆ, ಸಮುದಾಯದ ವಿಶ್ವಾಸವನ್ನು ಗಳಿಸಿ ಯೋಜನೆಯನ್ನು ಹಾಕಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರ್ಹ ವಿಕಲಚೇತನ ಫಲಾನುಭವಿಗಳಿಗೆ ಸಹಾಯಧನದ ಚೆಕ್ಕನ್ನು ಹಸ್ತಾಂತರಿಸಲಾಯಿತು. ಮತ್ತು ವಸತಿ ಯೋಜನೆಯ ಫಲಾನುಭವಿಗಳಿಗೆ ಮಾಹಿತಿಯನ್ನು ನೀಡಲಾಯಿತು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರಾದ ಸುದೀಪ್ ಕುಮಾರ್ ಶೆಟ್ಟಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಇಬ್ರಾಹಿಂ.ಕೆ.ಮಾಣಿ, ರಮಣಿ.ಡಿ.ಪೂಜಾರಿ, ನಾರಾಯಣ ಶೆಟ್ಟಿ, ಸೀತಾ, ಸುಜಾತಾ, ಅಂಗನವಾಡಿ ಮೇಲ್ವಿಚಾರಕಿ ರೋಹಿಣಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.




