“ಹನಿಮೂನ್ ಹೇಗಿರುತ್ತೆ ಗೊತ್ತಾ?” ಎಂದು ವಿದ್ಯಾರ್ಥಿನಿಯೊಂದಿಗೆ ಅಶ್ಲೀಲವಾಗಿ ವರ್ತನೆ: ಪೋಷಕರು, ಗ್ರಾಮಸ್ಥರಿಂದ ಧರ್ಮದೇಟು: ಶಿಕ್ಷಕ ಅಮಾನತು
ಕೋಲಾರ :10ನೇ ತರಗತಿ ವಿದ್ಯಾರ್ಥಿನಿ ಜೊತೆಗೆ ಅಶ್ಲೀಲವಾಗಿ ವರ್ತನೆ ತೋರಿದ ತಾಲೂಕಿನ ನರಸಾಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಕನ್ನಡ ಶಿಕ್ಷಕ ಸಿ ಎಂ ಪ್ರಕಾಶ್ ನನ್ನು ಅಮಾನತುಗೊಳಿಸಲಾಗಿದೆ.
ಬಾಲಕಿಗೆ ಹನಿಮೂನ್ ಹೇಗಿರುತ್ತೆ ಎಂದು ಪ್ರಶ್ನಿಸುತ್ತಿದ್ದ ಶಿಕ್ಷಕ ವಿದ್ಯಾರ್ಥಿನಿಯರ ಮೈ ಮುಟ್ಟಿ ಮಾತನಾಡಿಸುತ್ತಿದ್ದಲ್ಲದೆ ಅಶ್ಲೀಲವಾಗಿ ವರ್ತನೆ ತೋರಿಸುತ್ತಿದ್ದಾರೆ. ಕೂಡಲೇ ಇವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬುಧವಾರ ಪೋಷಕರು ಶಾಲೆಯಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೆ ಶಿಕ್ಷಕನಿಗೆ ಗೂಸಾ ನೀಡಿದ್ದರು.
ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದ ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ನೀಡಿದ ವರದಿ ಆಧರಿಸಿ ಶಿಕ್ಷಕನನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಡಿ ಡಿ ಪಿ ಐ ಕೃಷ್ಣಮೂರ್ತಿ ತಿಳಿಸಿದ್ದಾರೆ. ಈ ಹಿಂದೆ ಕೆಲಸ ಮಾಡಿದ ಶಾಲೆಗಳಲ್ಲೂ ಕಾಮ ಸ್ವರೂಪಿ ಪ್ರಕಾಶ್ ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ಹಿನ್ನಲೆಯಲ್ಲಿ ಸೇವೆಯಿಂದ ಅಮಾನತುಗೊಂಡಿದ್ದರು ಎಂದು ಪೋಷಕರು ದೂರಿದ್ದಾರೆ.
ಮಂಗಳವಾರ ರಾತ್ರಿ ಶಿಕ್ಷಕ ಪ್ರಕಾಶ್ 10ನೇ ತರಗತಿ ವಿದ್ಯಾರ್ಥಿನಿಯ ಮೊಬೈಲ್ ಗೆ ಕಳಿಸಿದ್ದ ಮೆಸೇಜ್ ಗಳನ್ನು ಗಮನಿಸಿದ ಪೋಷಕರು ಬುಧವಾರ ಬೆಳಿಗ್ಗೆ ಶಾಲೆಗೆ ಬಂದು ಎಸ್ ಡಿ ಎಂ ಸಿ ಸಮಿತಿ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಸದಸ್ಯರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಗೂಸಾ ನೀಡಿದರು.
ಶಿಕ್ಷಕರು ನನ್ನನ್ನು ಕೆಟ್ಟದಾಗಿ ನೋಡುತ್ತಿದ್ದರು ದೇಹದ ಭಾಗಗಳನ್ನು ಸ್ಪರ್ಶಿಸುತ್ತಿದ್ದರು ಆಗಾಗ್ಗೆ ಫೋನ್ ಮಾಡಿ ಮಾತನಾಡುವಂತೆ ಒತ್ತಾಯಿಸುತ್ತಿದ್ದರು ಎಂದು ಬಾಲಕಿಯು ತನಿಖೆಗೆ ಬಂದಿದ್ದ ಬಿ ಇ ಓ ಕನ್ನಯ್ಯ ರವರಿಗೆ ಮಾಹಿತಿ ನೀಡಿದ್ದಾರೆ.
ಎಸ್ ಡಿ ಎಂ ಸಿ ಅಧ್ಯಕ್ಷ ಎ ನಾರಾಯಣಸ್ವಾಮಿ ಹಾಗೂ ಪೋಷಕರು ಬಿ ಇ ಓ ಕನ್ನಯ್ಯ ರವರಿಗೆ ಮನವಿ ಸಲ್ಲಿಸಿ ಸ್ಥಳೀಯರೇ ಆಗಿರುವ ಶಿಕ್ಷಕ ಈ ಮೊದಲು ಸಹ ಅರಬ್ಬಿ ಕೊತ್ತನೂರು, ವೇಮಗಲ್, ನರಸಾಪುರ ಹಾಗೂ ಮತ್ತಿತರ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿಯೂ ಇದೇ ರೀತಿ ಆರೋಪ ಹೊಂದಿದ್ದಾರೆ, ಇವರ ವಿರುದ್ಧ ಇಲಾಖೆ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.




