ಸುಳ್ಯ: ಗೋಣಿಚೀಲದಲ್ಲಿ ಮಹಿಳೆ ಮೃತದೇಹ ಪತ್ತೆ: ಪತಿಯೇ ಹತ್ಯೆಗೈದು ಪರಾರಿಯಾಗಿರುವ ಶಂಕೆ
ಸುಳ್ಯ: ಗೋಣಿಚೀಲದೊಳಗೆ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಪತಿಯೇ ಕೊಲೆಗೈದಿರುವ ಶಂಕೆ ವ್ಯಕ್ತವಾಗಿರುವ ಘಟನೆ ಬೀರಮಂಗಲದ ಬಾಡಿಗೆ ಮನೆಯೊಂದರಲ್ಲಿ ನಡೆದಿದೆ.
ಸುಳ್ಯದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿರುವ ಇಮ್ರಾನ್ ಎಂಬಾತನ ಪತ್ನಿಯ ಮೃತದೇಹ ಗೋಣಿಚೀಲದೊಳಗೆ ಪತ್ತೆಯಾಗಿದೆ.
ಇನ್ನು ಕಳೆದ ಆರು ತಿಂಗಳಿನಿಂದ ಈ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದು, ಎರಡು ದಿನಗಳ ಹಿಂದಷ್ಟೇ ಇಮ್ರಾನ್ ಊರಿಗೆ ತೆರಳುವುದಾಗಿ ಹೊಟೇಲ್‌ನಲ್ಲಿ ಹೇಳಿ ಹೋಗಿದ್ದ. ಇನ್ನು ಕೆಲ ದಿನಗಳ ಹಿಂದೆ ಮನೆಯಲ್ಲಿ ಕಿರುಚಿದ ಶಬ್ದ ಕೇಳಿದ್ದಲ್ಲದೆ, ಇಮ್ರಾನ್ ಊರಿಗೆಂದು ಹೊರಟು ಹೋಗಿದ್ದಾಗ ಪತ್ನಿಯನ್ನು ಕರೆದೊಯ್ದಿರಲಿಲ್ಲವಾದ್ದರಿಂದ ಅಕ್ಕಪಕ್ಕದ ರೂಂನಲ್ಲಿ ವಾಸವಾಗಿದ್ದವರಿಗೆ ಸಂಶಯ ಮೂಡಿತ್ತು. ಹೀಗಾಗಿ ಆತ ಕೆಲಸ ಮಾಡುತ್ತಿದ್ದ ಹೊಟೇಲ್ ಮಾಲಕರಿಗೆ ಅಕ್ಕಪಕ್ಕದವರು ವಿಷಯ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಇಂದು ಸಂಜೆ ಬಂದು ರೂಂ ಬಾಗಿಲು ಒಡೆದು ನೋಡಿದಾಗ ಗೋಣಿಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಆಕೆಯನ್ನು ಆಕೆಯ ಪತಿ ಇಮ್ರಾನ್ ಕೊಲೆಗೈದು ಗೋಣಿಚೀಲದಲ್ಲಿ ಮೃತದೇಹ ತುಂಬಿಸಿಟ್ಟು ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.
ಸುಳ್ಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದು, ಫಿಂಗರ್ ಪ್ರಿಂಟ್ ತಜ್ಞರು ಮತ್ತು ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.





