ಟ್ರ್ಯಾಕ್ಟರ್ ರ್‍ಯಾಲಿ ವೇಳೆ ಬಂಧಿತರಾಗಿದ್ದ 83 ಮಂದಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ ಪಂಜಾಬ್ ಸರಕಾರ
ಪಂಜಾಬ್: ಕಳೆದ ಗಣರಾಜ್ಯೋತ್ಸವದಂದು ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ಹಮ್ಮಿಕೊಂಡಿದ್ದರು. ಕೆಲವು ಕಿಡಿಗೇಡಿಗಳಿಂದಾಗಿ ಹಿಂಸಾಚಾರ ಸಂಭವಿಸಿದ ನಂತರ ದೆಹಲಿ ಪೊಲೀಸರು 83 ಮಂದಿಯನ್ನು ಬಂಧಿಸಿದ್ದರು.
ಅಂದು ಬಂಧಿತರಾಗಿದ್ದವರಿಗೆ ಪಂಜಾಬ್ ಸರ್ಕಾರ ಆರ್ಥಿಕ ಸಹಾಯವನ್ನು ಘೋಷಿಸಿದೆ. ಈ ಮೂಲಕ ಕೇಂದ್ರದ ವಿರುದ್ಧ ಪಂಜಾಬ್‌ನಲ್ಲಿರುವ ಕಾಂಗ್ರೆಸ್ ಸರ್ಕಾರ ಹೊಸ ಹೋರಾಟಕ್ಕೆ ಮುನ್ನುಡಿ ಬರೆದಿದೆ.
ಖಾಸಗಿಯವರ ಹಿಡಿತಕ್ಕೆ ಕೃಷಿ ವಲಯವನ್ನು ದೂಡುವ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿ ಒಂದು ವರ್ಷದಿಂದ ದೆಹಲಿಯಲ್ಲಿ ಪಂಜಾಬ್ ಹಾಗೂ ಹರಿಯಾಣ ರೈತರು ಹೋರಾಟ ನಡೆಸುತ್ತಿದ್ದಾರೆ. ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಪಟ್ಟು ಹಿಡಿದಿದ್ದಾರೆ.
ದೆಹಲಿ ಪೊಲೀಸರು ಮತ್ತು ರೈತ ಮುಖಂಡರ ನಡುವಿನ ಮಾತುಕತೆಯ ನಂತರ ಕಳೆದ ಜನವರಿ 26ರಂದು ರೈತರಿಂದ ಟ್ರ್ಯಾಕ್ಟರ್ ರ್‍ಯಾಲಿ ನಡೆಯಲು ಅನುಮತಿ ದೊರೆಯಿತು. ಪ್ರಭುತ್ವದೊಂದಿಗೆ ಗುರುತಿಸಿಕೊಂಡಿದ್ದ ಕೆಲವು ಕಿಡಿಗೇಡಿಗಳು ರೈತ ಚಳವಳಿಗೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಟ್ರ್ಯಾಕ್ಟರ್ ರ್‍ಯಾಲಿಯಂದು ಮಾಡಿದ್ದರು.
“ಪ್ರತಿಭಟನಾಕಾರರ ಗುಂಪುಗಳು ಪೂರ್ವ ನಿಯೋಜಿತ ಮಾರ್ಗವನ್ನು ಅನುಸರಿಸಲಿಲ್ಲ. ದೆಹಲಿ ಪ್ರವೇಶಿಸಲು ಬ್ಯಾರಿಕೇಡ್‌ಗಳನ್ನು ದ್ವಂಸ ಮಾಡಿದರು. ಕೆಂಪು ಕೋಟೆಯನ್ನು ಪ್ರವೇಶಿಸಿ, ಅನಪೇಕ್ಷಿತ ಬಾವುಟವನ್ನು ಹಾರಿಸಿದರು” ಎಂದು ಪೊಲೀಸರು ಆರೋಪಿಸಿದ್ದರು.





