ಪುತ್ತೂರು: ಚುನಾವಣೆಯಲ್ಲಿ ಅಭ್ಯರ್ಥಿತನದ ಸೀಟು ಬಿಟ್ಟು ಕೊಡ್ಲಿಕ್ಕೆ ಅದೇನು ಬಸ್ಸಿನ ಸೀಟಾ..?: ಕಾವು ಹೇಮನಾಥ ಶೆಟ್ಟಿಗೆ ಟಾಂಗ್ ಕೊಟ್ಟ ಶಕುಂತಳಾ ಶೆಟ್ಟಿ
ಪುತ್ತೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೀಟು ಪಾಲಿಟಿಕ್ಸ್ ಆರಂಭವಾಗಿದೆ. ಕೈ ಪಾಳೆಯಾದ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮತ್ತು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ನಡುವಿನ ಶೀತಲ ಸಮರ ಇದೀಗ ಬೀದಿಗೆ ಬಂದಿದೆ.
ಕಾವು ಹೇಮನಾಥ ಶೆಟ್ಟಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ‘ಚುನಾವಣೆಯಲ್ಲಿ ಅಭ್ಯರ್ಥಿತನದ ಸೀಟು ಬಿಟ್ಟು ಕೊಡ್ಲಿಕ್ಕೆ ಅದೇನು ಬಸ್ಸಿನ ಸೀಟಾ..? ಇಟ್ಟುಕೊಳ್ಳುವ ತಾಕತ್ತಿದ್ರೆ ತಾನೇ ಬಿಟ್ಟುಕೊಡುವ ಪ್ರಶ್ನೆ ಬರೋದು. ಮೊದಲು ಹೇಮನಾಥ ಶೆಟ್ಟಿ ವಿರೋಧ ಪಕ್ಷದವರ ಜೊತೆ ಹಣವನ್ನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಪ್ರಮಾಣ ಮಾಡಿ ಹೇಳಲಿ’ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಆಕ್ರೋಶ ಹೊರಹಾಕಿದರು.
ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಶಕುಂತಲಾ ಶೆಟ್ಟಿ ಅಭ್ಯರ್ಥಿತನ ಬಿಟ್ಟು ಕೊಡುವ ಪ್ರಮಾಣ ಮಾಡಿದ ಹೇಳಿಕೆಗೆ ತಿರುಗೇಟು ನೀಡಿದ ಅವರು ‘ನಾನು ಕಾಂಗ್ರೆಸ್‌ಗೆ ಆಗ ತಾನೇ ಪಾದಾರ್ಪಣೆ ಮಾಡಿದ್ದೆ. ಬಂದವಳು ನಾನು ನನಗೇ ಸೀಟು ಕೇಳಿಲ್ಲ. ಇನ್ನು ಆ ಸೀಟನ್ನು ಬಿಟ್ಟು ಕೊಡ್ತೇನೆ ಅಂತ ಹೇಳಲು ಹೇಗೆ ಸಾಧ್ಯ.
ಹೈಕಮಾಂಡ್ ತೀರ್ಮಾನಿಸಿ ಕೊಡುವ ಅಭ್ಯರ್ಥಿತನದ ಸೀಟನ್ನು ಹೇಗೆ ಬಿಟ್ಟು ಕೊಡಲು ಸಾದ್ಯವಾಗುತ್ತದೆ. ನಾನು ಈ ಬಾರಿ ಹೇಮನಾಥ ಶೆಟ್ಟಿಗೆ ಅಭ್ಯರ್ಥಿತನ ಬಿಟ್ಟುಕೊಡುವುದಾಗಿ ಪ್ರಮಾಣ ಮಾಡಿಯೇ ಇಲ್ಲ. ಮರ್ಯಾದಸ್ಥರು ಮಾಡುವ ಕೆಲಸವೂ ಅದು ಅಲ್ಲ.
ಹೀಗೆ ಪ್ರಮಾಣ ಮಾಡುವ ಪ್ರಮೇಯವೂ ಬರುವುದಿಲ್ಲ. ಹೈಕಮಾಂಡ್ ಮೂಲಕ ಆಯ್ಕೆಯಾದ ವ್ಯಕ್ತಿ ಇನ್ನೊಬ್ಬರಿಗೆ ಪಕ್ಷದ ಟಿಕೆಟ್ ಕೊಡುವಂತೆ ಸೂಚಿಸಲು ಸಾಧ್ಯವೂ ಇಲ್ಲ.
ನಾನು ಪ್ರಮಾಣ ಮಾಡುವ ಮೊದಲು ಕಾವು ಹೇಮನಾಥ ಶೆಟ್ಟಿ ಪ್ರಮಾಣ ಮಾಡಿ ಪಕ್ಷದಲ್ಲಿದ್ದು ಪಕ್ಷಕ್ಕೆ ದ್ರೋಹ ಮಾಡಿಲ್ಲ. ವಿರೋಧ ಪಕ್ಷದವರ ಜೊತೆ ಸೇರಿ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಹೇಳಬೇಕು. ಗೊತ್ತಿದ್ದು ನಾವು ಯಾರನ್ನೂ ಸಣ್ಣವರನ್ನಾಗಿ ಮಾಡುವುದಿಲ್ಲ.
ಜನರ ಸೇವೆ ಮಾಡಿದ್ರೆ , ಜನ ನಮ್ಮನ್ನು ನಂಬುವಂತಿದ್ರೆ ಅಭ್ಯರ್ಥಿ ಸ್ಥಾನ ಹುಡುಕಿಕೊಂಡು ಬರುತ್ತದೆ. ನನಗೇ ನಾನು ಸೀಟು ಕೇಳದೆ ಇದ್ದರೆ ಬೇರೆಯವರಿಗೆ ಬಿಟ್ಟು ಕೊಡ್ತೇನೆ ಅಂತ ಹೇಳಿಕ್ಕೆ ಆಗಲ್ಲ.
ಪ್ರಮಾಣ ಮಾಡಿದ್ದೇನೆ ಎನ್ನುವ ವಿಚಾರ ಸಂಪೂರ್ಣ ಸುಳ್ಳು.
ವಿರೋಧ ಪಕ್ಷದವರ ಅಣತಿಯಂತೆ ನಡೆಯುವ ಮೊದಲು ಪಕ್ಷಕ್ಕೆ ನಿಷ್ಠರಾಗಬೇಕು. ಆ ಬಳಿಕ ಅಭ್ಯರ್ಥಿತನದ ಬಗ್ಗೆ ಯೋಚಿಸಬೇಕು’ ಎಂದು ವಾಗ್ದಾಳಿ ನಡೆಸಿದರು.





