ಬೆಳ್ತಂಗಡಿ: ಚಂದ್ರಶೇಖರ್ ಪೂಜಾರಿ ಸಾವು ಪ್ರಕರಣ: ಆರೋಪಿ ಯೋಗೀಶ್ ಅರೆಸ್ಟ್: ಸಾಲ ಕಟ್ಟುವ ವಿಚಾರವಾಗಿ ಆತ್ಮಹತ್ಯೆಗೆ ಶರಣು
ಬೆಳ್ತಂಗಡಿ: ಸಂಘದ ಸಾಲ ಕಟ್ಟುವ ವಿಚಾರವಾಗಿ ಬೆದರಿಕೆ ಹಾಕಿ ಓರ್ವನ ಸಾವಿಗೆ ಕಾರಣವಾದ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಚಂದ್ರಶೇಖರ್ ಪೂಜಾರಿ(24) ಸಂಘದ ಸಾಲ ಕಟ್ಟುವ ವಿಚಾರದಲ್ಲಿ ನಾಲ್ಕು ಜನರ ಬೆದರಿಕೆ ಹಾಕಿದರಿಂದ ಭಯದಿಂದ ಆಗಸ್ಟ್ 25 ರಂದು ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಮನೆ ಮಂದಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಆದರೆ ಸೆಪ್ಟೆಂಬರ್ 23 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
ಈ ಬಗ್ಗೆ ಮನೆಯವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಾಲ್ಕು ಜನರ ಮೇಲೆ ಪ್ರಕರಣ ದಾಖಲಿಸಿದ್ದರು. ಆದ್ರೆ ಪ್ರಕರಣ ಸಂಬಂಧ ಒಬ್ಬ ಆರೋಪಿಯಾದ ತೋಟತ್ತಾಡಿ ನಿವಾಸಿ ಮೇಸ್ತ್ರೀ ಕೆಲಸ ಮಾಡುವ ಯೋಗೀಶ್ (34) ಎಂಬಾತನನ್ನು ಧರ್ಮಸ್ಥಳದಲ್ಲಿ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪಿಎಸ್ಐ ಅನಿಲ್ ಕುಮಾರ್ ಡಿ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಇನ್ನು ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಧರ್ಮಸ್ಥಳ ಪೊಲೀಸರು ಬಲೆ ಬಿಸಿದ್ದಾರೆ.





