ಸುಳ್ಯ: ಯಾತ್ರಿಕರ ಜೀಪಿನಿಂದ ಬ್ಯಾಗ್ ಎಗರಿಸಿದ ಕಳ್ಳ: ಕಳ್ಳತನದ ದ್ರಶ್ಯ ಸಿಸಿಟಿವಿ ಯಲ್ಲಿ ಸೆರೆ: ಕಳ್ಳ ಪೊಲೀಸರ ವಶ
ಸುಳ್ಯ: ನಗರದ ಗಾಂಧಿನಗರ ಮೆಟ್ರೋ ಹೋಟಲ್ ಮುಂಭಾಗದಿಂದ ಕಳ್ಳನೊಬ್ಬ ಯಾತ್ರಿಕರ ಜೀಪಿನಿಂದ ವ್ಯಾನಿಟಿ ಬ್ಯಾಗ್ ಎಗರಿಸಿದ್ದು ಬ್ಯಾಗ್ ಕಳೆದುಕೊಂಡಿದ್ದ ಯಾತ್ರಿಕರು ಕಳ್ಳತನದ ದೃಶ್ಯವನ್ನು ಸಿಸಿ ಟಿವಿ ಪುಟೇಜ್ ಸಹಾಯದಿಂದ ಪತ್ತೆ ಹಚ್ಚಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ.
ಕೇರಳ ಮೂಲದ ಯಾತ್ರಿಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ಇಂದು ಮಡಿಕೇರಿ ಕಡೆ ಹೋಗುತ್ತಿದ್ದು ಗಾಂಧಿನಗರ ಮೆಟ್ರೋ ಹೋಟೆಲಿನಲ್ಲಿ ಉಪಹಾರಕ್ಕೆ ಎಂದು ತೆರಳಿದ್ದರು ಎನ್ನಲಾಗಿದೆ.
ಉಪಹಾರ ಮುಗಿಸಿ ಜೀಪಿನ ಬಳಿ ಬಂದಾಗ ಜೀಪಿನ ಮುಂಭಾಗದ ಸೀಟಿನಲ್ಲಿ ಇರಿಸಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್ ಕಂಡು ಬರಲಿಲ್ಲ.
ಇನ್ನು ಕೂಡಲೇ ಅವರು ಹೋಟೆಲ್ ಬಳಿ ಬಂದು ವಿಚಾರಿಸಿದಾಗ ಕಳ್ಳತನ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಂತರ ಗಾಂಧಿನಗರ ಪ್ರಗತಿ ಚಿಕನ್ ಅಂಗಡಿಯ ಸಿಸಿ ಟಿವಿ ಪರಿಶೀಲಿಸಿದಾಗ ಒಬ್ಬ ವ್ಯಕ್ತಿ ಜೀಪಿನಿಂದ ಬ್ಯಾಗನ್ನು ಕದ್ದೋಯುವ ದೃಶ್ಯ ಕಂಡು ಬಂದಿದೆ.
ಕೂಡಲೆ ಸ್ಥಳೀಯರು ಮತ್ತು ಯಾತ್ರಿಕರು ಆತನನ್ನು ಹಿಡಿಯಲು ಹುಡುಕಾಟ ಮಾಡಿ ಪಕ್ಕದಲ್ಲಿದ್ದ ಬಾರಿನೊಳಗೆ ಹೋಗಿ ನೋಡಿದ್ದಾರೆ. ಈ ಸಂದರ್ಭ ಬ್ಯಾಗ್ ಕಳ್ಳತನ ಮಾಡಿದ್ದ ವ್ಯಕ್ತಿ ಬ್ಯಾಗಿನಲ್ಲಿದ್ದ ಮೊಬೈಲ್ ಫೋನನ್ನು ಹಿಡಿದುಕೊಂಡು ಕುಳಿತಿರುವ ದೃಶ್ಯ ಕಂಡುಬಂದಿದೆ.
ಕೂಡಲೇ ಆತನನ್ನು ವಿಚಾರಿಸಿದಾಗ ಮೊಬೈಲ್ ಫೋನ್ ತೆಗೆದಿರುವುದಾಗಿ ಹೇಳಿದ್ದಾನೆ. ಬ್ಯಾಗಿನ ವಿಷಯ ಕೇಳಿದಾಗ ನನಗೆ ಗೊತ್ತಿಲ್ಲ ಎಂದು ಪಟ್ಟು ಹಿಡಿದು ಕುಳಿತ ಸಂದರ್ಭ ಅವರು ಆತನನ್ನು ಸುಳ್ಯ ಪೊಲೀಸ್ ಠಾಣೆಗೆ ತಮ್ಮ ಜೀಪಿನಲ್ಲಿ ಕೊಂಡೋಗಿ ಪೊಲೀಸರಿಗೆ ಒಪ್ಪಿಸಿ ಘಟನೆಯ ವಿವರವನ್ನು ಪೊಲೀಸರಿಗೆ ವಿವರಿಸಿದ್ದಾರೆ.
ಈ ವೇಳೆ ಪೊಲೀಸರು ಆತನನ್ನು ವಿಚಾರಿಸಿದಾಗ ಮದ್ಯಪಾನ ಸೇವಿಸುವುದಕ್ಕಾಗಿ ದುಡ್ಡಿಗಾಗಿ ತಾನೇ ತೆಗೆದಿರುವುದಾಗಿ ಹೇಳಿದ್ದು, ನಂತರ ಪೊಲೀಸರು ಆತನನ್ನು ಮತ್ತೆ ಗಾಂಧಿನಗರದ ಬಾರಿನ ಬಳಿ ಕರೆದುಕೊಂಡು ಬಂದಾಗ ಬಾರಿನ ಮೇಲ್ಭಾಗದಲ್ಲಿ ಎಸೆದಿದ್ದ ಬ್ಯಾಗನ್ನು ತೆಗೆದುಕೊಟ್ಟಿರುತ್ತಾನೆ.
ಬ್ಯಾಗಿನೊಳಗೆ ಚಿನ್ನದ ಉಂಗುರ ಮತ್ತು ಒಂದು ಸಾವಿರ ನಗದು ಇದ್ದು ಕಳ್ಳನಿಗೆ ಇದನ್ನು ಕಂಡಿರಲಿಲ್ಲ.
ಒಟ್ಟಿನಲ್ಲಿ ಯಾತ್ರಿಕರು ಕೂಡಲೇ ಕಾರ್ಯಾಚರಣೆ ಮಾಡದೇ ಇದ್ದಲ್ಲಿ ಯಾತ್ರಿಕರಿಗೆ ಸುಮಾರು 50 ಸಾವಿರ ರೂಪಾಯಿಗಳ ನಷ್ಟ ಉಂಟಾಗುತ್ತಿತ್ತು ಎಂದು ತಿಳಿದು ಬಂದಿದೆ.






