ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ಮೂರು ತಿಂಗಳ ಹಿಂದೆ ನಡೆದಿದ್ದ ಗುಂಪು ಘರ್ಷಣೆಯ ಕಾರಣಕ್ಕಾಗಿ ಗ್ರಾಮ ತೊರೆದಿದ್ದ ನಾಗರಾಜ (25) ಎನ್ನುವ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.
ಘರ್ಷಣೆ ಬಳಿಕ ನಾಗರಾಜ ಗಂಗಾವತಿಯ ಬಸವಣ್ಣ ವೃತ್ತದ ಬಳಿಯ ಸಂಬಂಧಿಕರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಗಂಗಾವತಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೊಹರಂ ಹಬ್ಬದ ಮರುದಿನ ಹುಲಿಹೈದರ ಗ್ರಾಮದಲ್ಲಿ ವಾಲ್ಮೀಕಿ ವೃತ್ತದ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ ಇಬ್ಬರು ಮೃತಪಟ್ಟಿದ್ದರು. 80ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಳ್ಳಾರಿ ಹಾಗೂ ಧಾರವಾಡ ಜೈಲಿಗೆ ಕಳುಹಿಸಲಾಗಿದೆ.
ನಾಗರಾಜನ ಅಣ್ಣ ಗೋಸಲಪ್ಪ ಎನ್ನುವವರ ವಿರುದ್ಧವೂ ಘರ್ಷಣೆ ಪ್ರಕರಣದಲ್ಲಿ ದೂರು ದಾಖಲಾಗಿತ್ತು.
ಘರ್ಷಣೆಯಲ್ಲಿ ಭಾಗಿಯಾಗದೇ ಇದ್ದವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಗ ಆರೋಪಿಸಿದ್ದರು. ಇದೇ ಕಾರಣಕ್ಕೆ ನಾಗರಾಜ್ ಸೇರಿದಂತೆ ಅನೇಕರು ಊರು ತೊರೆದಿದ್ದರು.




