ಮೈದಾನಕ್ಕೆ ನುಗ್ಗಿದ ರೋಹಿತ್ ಶರ್ಮಾ ಅಭಿಮಾನಿ: 6.5 ಲಕ್ಷ ರೂ. ದಂಡ
ಮೆಲ್ಬರ್ನ್: ಭಾರತ ಹಾಗೂ ಜಿಂಬಾಬ್ವೆ ನಡುವಿನ ಪಂದ್ಯದ ನಡುವೆ ಹಿಟ್ಮ್ಯಾನ್ ರೋಹಿತ್ ಶರ್ಮಾರ ಅಭಿಮಾನಿಯೋರ್ವ ಮೈದಾನಕ್ಕೆ ನುಗ್ಗಿ ಬರೋಬ್ಬರಿ 6.5 ಲಕ್ಷ ರೂ. ದಂಡ ಕಟ್ಟುವಂತಾಗಿದೆ.
ಜಿಂಬಾಬ್ವೆ ಬ್ಯಾಟಿಂಗ್ ವೇಳೆ ರೋಹಿತ್ ಶರ್ಮಾ ಫೀಲ್ಡಿಂಗ್ ಮಾಡುತ್ತಿದ್ದರು. ಒಬ್ಬ ಬಾಲಕ ಏಕಾಏಕಿ ಭಾರತದ ಧ್ವಜ ಹಿಡಿದು ಪ್ರೇಕ್ಷಕರ ಗ್ಯಾಲರಿಯಿಂದ ಹಾರಿ ಮೈದಾನಕ್ಕೆ ಬಂದಿದ್ದಾನೆ. ಬಳಿಕ ರೋಹಿತ್ ಶರ್ಮಾ ಫೀಲ್ಡಿಂಗ್ ಮಾಡುತ್ತಿದ್ದೆಡೆಗೆ ಓಡಿದ್ದಾನೆ. ತಕ್ಷಣ ಭದ್ರತಾ ಸಿಬ್ಬಂದಿ ಬಾಲಕನನ್ನು ಹಿಡಿಯಲು ಮುಂದಾಗಿದ್ದಾರೆ.
ಈ ವೇಳೆ ಬಾಲಕ ಕಣ್ಣೀರಿಟ್ಟಿದ್ದಾನೆ. ರೋಹಿತ್ ಶರ್ಮಾ ಬಾಲಕನನ್ನು ಮೈದಾನಬಿಟ್ಟು ತೆರಳುವಂತೆ ಮನವಿ ಮಾಡಿಕೊಂಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೈದಾನಕ್ಕೆ ಬಂದ ಬಾಲಕನಿಗೆ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ 6.5 ಲಕ್ಷ ರೂ. ದಂಡ ಪ್ರಯೋಗಿಸಿದೆ ಎಂದು ವರದಿಯಾಗಿದೆ.